ಮೈಸೂರು ದಸರಾಗೆ ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡುತ್ತಿದ್ದರೆ, ಇತ್ತ ಮೈಸೂರಿನ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನವನ್ನು ವಿಧಿ ವಿಧಾನಗಳೊಂದಿಗೆ ಪೂಜಾಕೈಂಕರ್ಯ ನೆರವೇರಿಸುವ ಮೂಲಕ ಚಿನ್ನದ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸುತ್ತಿದ್ದಾರೆ.
ಮೈಸೂರು ದಸರಾದಲ್ಲಿ ಮಹಾರಾಜರು ನಡೆಸುವ ದರ್ಬಾರ್ ಗೆ ತನ್ನದೇ ಆದ ಇತಿಹಾಸವಿದೆ. ಸ್ವಾತಂತ್ರ್ಯಗೊಂಡ ಬಳಿಕ ಖಾಸಗಿ ದರ್ಬಾರ್ ಆಗಿ ಬದಲಾವಣೆಗೊಂಡಿದೆ. ಆದರೆ ಅವತ್ತು ಯಾವುದೆಲ್ಲ ವಿಧಿವಿಧಾನಗಳು ನಡೆಯುತ್ತಿದ್ದವೋ ಅದೆಲ್ಲವೂ ಈಗಲೂ ನಡೆಯುತ್ತಿದೆ. ದರ್ಬಾರ್ ನೋಡಿದರೆ ಇತಿಹಾಸದ ರಾಜರ ಆಡಳಿತ ಕಣ್ಮುಂದೆ ಬಂದ ಅನುಭವವಾಗುತ್ತದೆ.
ಇದೀಗ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರೇಷ್ಮೆ, ರತ್ನಖಚಿತ ಪ್ರಜ್ವಲಿಸುವ ರಾಜಪೋಷಾಕು ಧರಿಸಿ, ಮಹಾರಾಜರ ಗತ್ತು-ಗಾಂಭೀರ್ಯದಲ್ಲಿ ಸಿಂಹಾಸನವನ್ನೇರಿ ಎಲ್ಲರಿಗೂ ಬಲಗೈಎತ್ತಿ ಸೆಲ್ಯೂಟ್ ಮಾಡಿ ಬಳಿಕ ಆಸೀನರಾಗುವ ಮೂಲಕ ದರ್ಬಾರ್ ಆರಂಭಿಸಿದ್ದಾರೆ. ಈ ದರ್ಬಾರ್ ಒಂಬತ್ತು ದಿನಗಳ ಕಾಲ ನಡೆಯಲಿದೆ.
ಅರಮನೆ ಹೊರಗೆ ದಸರಾ ಅಂಗವಾಗಿ ನೂರಾರು ಕಾರ್ಯಕ್ರಮಗಳು ನಡೆದರೂ ಅರಮನೆ ಒಳಗೆ ದರ್ಬಾರ್ ಹಾಲ್‍ನಲ್ಲಿ ನಡೆಯುವ ಖಾಸಗಿ ದರ್ಬಾರ್ ಗೆ ಜನ ಸಾಮಾನ್ಯರಿಗೆ ಪ್ರವೇಶ ನಿಷೇಧ. ಕೆಲವೇ ಕೆಲವರಿಗೆ ಮಾತ್ರ ಇದನ್ನು ನೋಡುವ ಅವಕಾಶ ಸಿಗುತ್ತದೆ. ಹಾಗಾಗಿಯೇ ಇದು ಖಾಸಗಿ ದರ್ಬಾರ್ ಆಗಿದೆ.
ಇನ್ನು ಈ ದರ್ಬಾರ್ ಕುರಿತಂತೆ ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಹತ್ತು ಹಲವು ವಿಚಾರಗಳು ನಮಗೆ ಸಿಗುತ್ತವೆ. ಅದೇನೆಂದರೆ, ಹಿಂದಿನ ಮಹಾರಾಜರು ನವರಾತ್ರಿ ವೇಳೆ ಅರಮನೆಯ ಸಂಪ್ರದಾಯಬದ್ಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಪ್ರತಿದಿನ ಸರಿ ಸುಮಾರು ಮುಕ್ಕಾಲು ಗಂಟೆ ಕಾಲ ರತ್ನ ಖಚಿತ ಸಿಂಹಾಸನದಲ್ಲಿ ಆಸೀನರಾಗಿ ದರ್ಬಾರ್ ನಡೆಸುತ್ತಿದ್ದರಂತೆ. ಈ ವೇಳೆ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದವಂತೆ. ಸ್ವಾತಂತ್ರ್ಯ ಲಭಿಸಿದ ಬಳಿಕ ರಾಜಾಡಳಿತ ಕೊನೆಗೊಂಡಿತು. ಆದರೆ ಆಗ ಯಾವ ರೀತಿಯಲ್ಲಿ ರಾಜರು ದರ್ಬಾರ್ ನಡೆಸುತ್ತಿದ್ದರೋ ಅದನ್ನೇ ಅದೇ ರೀತಿ ಪರಂಪರಾಗತ ವಿಧಿ-ವಿಧಾನಗಳಂತೆಯೇ ನಡೆಸಿಕೊಂಡು ಹೋಗಲಾಗುತ್ತಿದೆ.
ಇಷ್ಟಕ್ಕೂ ಈ ಖಾಸಗಿ ದರ್ಬಾರ್ ಹೇಗೆ ನಡೆಯುತ್ತದೆ ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇಲ್ಲಿ ಸಂಪ್ರದಾಯಕ್ಕೆ ಕಿಂಚಿತ್ತು ಚ್ಯುತಿ ಬರದಂತೆ ನಡೆಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.
ನವರಾತ್ರಿಯ ಮೊದಲನೆಯ ದಿನ ಅಂದರೆ ಪಾಡ್ಯದ ದಿನ ಪ್ರಸ್ತುತ ಮಹಾರಾಜರಾಗಿ ಖಾಸಗಿ ದರ್ಬಾರ್ ನಡೆಸುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಬೆಳಗ್ಗೆ ಎದ್ದ ತಕ್ಷಣವೇ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿ, ಅರಮನೆಗೇ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳಸ್ನಾನ ಮಾಡಿಸಲಾಗುವುದು. ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಮುತೈದೆಯರು ಆರತಿ ಬೆಳಗುತ್ತಾರೆ.
ಆನಂತರ ಪೂಜೆಗೆ ಅಣಿಯಾಗುವ ಯದುವೀರ್ ಒಡೆಯರ್, ಮೊದಲಿಗೆ ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ಬಳಿಕ ಕಳಶಪೂಜೆ, ಕಂಕಣಪೂಜೆ ನಡೆಸಿ ತಮ್ಮ ಕುಲದೇವತೆ ಚಾಮುಂಡಿ ಸನ್ನಿಧಿಯಲ್ಲಿ ಕಂಕಣ ಧರಿಸುತ್ತಾರೆ. ಯದುವೀರ್ ಒಡೆಯರ್ ಜೊತೆಗೆ ಅವರ ಪತ್ನಿ ತ್ರಿಷಿಕಾಕುಮಾರಿ ಒಡೆಯರ್ ಕೂಡ ರಾಜಮನೆತನದ ಪದ್ಧತಿಯಂತೆ ಮಹಾರಾಣಿ ಸ್ಥಾನದಲ್ಲಿ ನಿಂತು ತಾವೂ ಕಂಕಣ ಧರಿಸುತ್ತಾರೆ. ಅಲ್ಲಿಂದ ಎಲ್ಲಾ ರೀತಿಯ ಕಠಿಣವ್ರತಗಳನ್ನೂ ಅರಮನೆಯ ಸಂಪ್ರದಾಯದಂತೆ ಚಾಚೂ ತಪ್ಪದೆ ನಡೆಸಬೇಕಾಗುತ್ತದೆ.
ದುರ್ಗೆಯ ದಿವ್ಯಸ್ವರೂಪಗಳಾದ ಬ್ರಹ್ಮಾಣಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಮಹೇಶ್ವರಿ, ದುರ್ಗಾ, ಕಾಳಿ, ಚಂಡಿಕೆ ಹೀಗೆ ಎಲ್ಲ ಶಕ್ತಿದೇವತೆಗಳನ್ನೂ ಆರಾಧಿಸಿ ಶಿವಸನ್ನಿಧಿ, ಕೃಷ್ಣಸನ್ನಿಧಿ, ಚಾಮುಂಡಿ ಸನ್ನಿಧಿ ಮುಂತಾದ ದೇವ-ದೇವಿಯರ ಸನ್ನಿಧಿಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಇದರ ನಂತರ ದೇವೀ ಭಾಗವತ ಪಾರಾಯಣ, ರಾಮಾಯಣ ಪಾರಾಯಣ ನಡೆಯುತ್ತದೆ. ಬಳಿಕ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆಗಳು ನಡೆದು ಅಷ್ಟೋತ್ತರವಾಗುತ್ತದೆ.
ಚಂಡಿಕಾಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಪೂಜೆ ಸೇರಿದಂತೆ ಅನೇಕ ಪೂಜಾವಿಧಿಗಳು ಸಾಂಗೋಪವಾಗಿ ನಡೆದು ದೇವೀ ಭಾಗವತವನ್ನು ಪಾರಾಯಣ ಮಾಡುವಾಗ ಮಹಿಷಾಸುರನನ್ನು ಸಾಂಕೇತಿಕವಾಗಿ ಸಂಹರಿಸಲಾಗುತ್ತದೆ. ಇದಕ್ಕಾಗಿ ಮರದಿಂದ ಮಹಿಷಾಸುರನ ಪ್ರತಿಕೃತಿಯನ್ನು ತಯಾರಿಸಿ ಅದಕ್ಕೆ ಕುಂಕುಮದ ರಕ್ತವರ್ಣವನ್ನು ಸುರಿಯಲಾಗುತ್ತದೆ.
ಕಾಳಿಕಾ ಪುರಾಣದ ಪ್ರಕಾರ ವೈದಿಕವಾಗಿ ಅರಮನೆಯೊಳಗೆ ಕಾರ್ಯಕ್ರಮ ನಡೆಸುವ ಮುನ್ನ ಬೆಳಿಗ್ಗೆ ರತ್ನಸಿಂಹಾಸನಕ್ಕೂ ಪೂಜೆ ಸಲ್ಲಿಸಲಾಗುತ್ತದೆ. ಈ ನಡುವೆ ಕಂಕಣಧಾರಿಗಳಾದ ಯದುವೀರ್ ಒಡೆಯರ್ ದಂಪತಿಗಳಿಗೆ ದಂಪತಿಪೂಜೆ ಮಾಡಲಾಗುತ್ತದೆ. ಹಾಗೆಯೇ ದರ್ಬಾರಿಗೆ ಬರುವುದಕ್ಕೂ ಮೊದಲು ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಸುಮಂಗಲೆಯರೊಡನೆ ಯದುವೀರ್ ಅವರ ಪಾದಪೂಜೆ ಮಾಡಿ ಹಣೆಗೆ ತಿಲಕ ಇಡುತ್ತಾರೆ. ಹತ್ತು ದಿನಗಳೂ ಒಡೆಯರ್ ಗೆ ಈ ರೀತಿ ಪಾದಪೂಜೆ ಮಾಡಲಾಗುತ್ತದೆ. ಇದು ಅರಮನೆಯ ಕಲ್ಯಾಣಮಂಟಪದ ಮೇಲ್ಭಾಗದಲ್ಲಿ ನಡೆಯುತ್ತದೆ. ಈ ಎಲ್ಲಾ ವಿಧಿ-ವಿಧಾನ ಪೂಜೆಗಳ ಜೊತೆ ವಿವಿಧ ಬಗೆಯ ದಂತದ ಗೊಂಬೆಗಳನ್ನು ಗೊಂಬೆತೊಟ್ಟಿಯಲ್ಲಿ ಜೋಡಿಸಿ ಕೂರಿಸಿ ಗೊಂಬೆ ಆರತಿ ಮಾಡಲಾಗುತ್ತದೆ.
ಆ ನಂತರ ರಾಜಗಾಂಭೀರ್ಯದಿಂದ ರತ್ನಸಿಂಹಾಸನ ಏರಿ ಆ ಸ್ಥಾನಕ್ಕೆ ಬಲಗೈ ಎತ್ತಿ ಸಲ್ಯೂಟ್ ಮಾಡಿ ಗತ್ತಿನಿಂದ ಕುಳಿತುಕೊಳ್ಳುತ್ತಾರೆ. ಆಗ ಹೊಗಳು ಭಟರು ರಾಜಾಧಿರಾಜ … ರಾಜ ಮಾರ್ತಾಂಡ … ಶ್ರೀಮನ್ಮಹಾರಾಜ … ಬಹುಪರಾಕ್ … ಮುಂತಾದ ಪರಾಕುಗಳನ್ನು ಮೊಳಗಿಸುತ್ತಾರೆ.
ನವರಾತ್ರಿಯ ಮೊದಲನೆ ದಿನ ಅಂದರೆ ಪಾಡ್ಯದ ದಿನ ಬೆಳಿಗ್ಗೆಯಿಂದ ಈ ಖಾಸಗಿ ದರ್ಬಾರ್ ನಡೆಯುತ್ತದೆ. ಉಳಿದ ದಿನಗಳಲ್ಲಿ ಸಂಜೆ ವೇಳೆಯಲ್ಲಿ ನಡೆಯುತ್ತದೆ. ದ್ವಾರಪಾಲಕರು, ಪರಾಕು ಹೇಳುವವರು, ಒಡೆಯರ್ ಆಪ್ತ ಸಿಬ್ಬಂದಿ, ರಾಜದಂಡ ಹಿಡಿದ ಆಸ್ಥಾನ ಅಧಿಕಾರಿಗಳು, ರಾಜಪುರೋಹಿತರು, ವಿದ್ವಾಂಸರು, ಒಡೆಯರ್ ವಂಶಸ್ಥರು, ಬಂಧುಮಿತ್ರರು ಮಾತ್ರ ಖಾಸಗಿ ದರ್ಬಾರಿನಲ್ಲಿ ಪಾಲ್ಗೊಳ್ಳುತ್ತಾರೆ.
ಪ್ರತಿದಿನ ಸಂಜೆ ಖಾಸಗಿ ದರ್ಬಾರ್ ನಡೆಯುವ ಮುನ್ನ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳಿಗೆ ಅಲಂಕಾರ ಮಾಡಿ ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಅರಮನೆಯೊಳಗೆ ಇವುಗಳ ಪ್ರವೇಶವಾದ ನಂತರ ಖಾಸಗಿ ದರ್ಬಾರ್ ಆರಂಭವಾಗುತ್ತದೆ. ಸಿಂಹಾಸನಾರೂಢರಾದ ಯದುವೀರ್ ಒಡೆಯರ್ ಗೆ ದೇವಾಲಯಗಳಿಂದ ಆಗಮಿಸಿದ ಪುರೋಹಿತರು ಪ್ರಸಾದ ಮತ್ತು ಮಂತ್ರಪುಷ್ಪ ಹಾಗೂ ಮಂಗಳಾಕ್ಷತೆ ನೀಡುವುದು, ನಜರ್ ಒಪ್ಪಿಸುವುದು ನಡೆಯುತ್ತದೆ. ನಂತರ ಸಿಂಹಾಸನಾರೂಢ ಯದುವೀರ್ ಒಡೆಯರ್ ಅವರು ರಾಜಪರಿವಾರದ ಮಂದಿಗೆ ಕಾಣಿಕೆ ನೀಡುತ್ತಾರೆ.
ದರ್ಬಾರ್ ಸಂದರ್ಭ 108 ಸಲ ದೇವಿ ಭಾಗವತ ಪಠಣ, 10 ಮಂದಿ ವೇದಮೂರ್ತಿಗಳಿಂದ ಸಪ್ತಶತಿ ಪಠಣ, ನವಮಿಯ ರಾತ್ರಿ ಆಲಮೇಲಮ್ಮನ ದೇವಸ್ಥಾನದಲ್ಲಿ ಪೂಜೆ, ಆಯುಧಶಾಲೆಯಲ್ಲಿ ಆಯುಧಪೂಜೆ, ವಿಜಯದಶಮಿಯ ದಿನ ಜಟ್ಟಿಗಳ ವಜ್ರಮುಷ್ಠಿ ಕಾಳಗ, ಇದೇ ದಿನ ಶಮೀಪೂಜೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ಶ್ರದ್ಧಾಭಕ್ತಿಗಳಿಂದ ನಡೆಸಲಾಗುತ್ತದೆ.
ಒಟ್ಟಾರೆ ಹೇಳಬೇಕೆಂದರೆ ಇದು ಬರೀ ಖಾಸಗಿ ದರ್ಬಾರ್ ಅಲ್ಲ ಮೈಸೂರು ರಾಜರು ನಡೆಸಿಕೊಂಡು ಬಂದ ಐತಿಹಾಸಿಕ ಸಾಂಸ್ಕೃತಿಕ, ಕಲೆ ಸಂಪ್ರದಾಯ ವೈಭವದ ಪ್ರತೀಕ ಎಂದರೂ ಅತಿಶಯೋಕ್ತಿಯಾಗಲಾರದು.