News Kannada
Friday, October 07 2022

ಮೈಸೂರು

ಇಂದು ತಲಕಾವೇರಿಯಲ್ಲಿ ‘ಕಾವೇರಿ’ ದರ್ಶನ - 1 min read

Photo Credit :

ಇಂದು ತಲಕಾವೇರಿಯಲ್ಲಿ ‘ಕಾವೇರಿ’ ದರ್ಶನ

ವರ್ಷಕ್ಕೊಮ್ಮೆ ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಸಂಕ್ರಾಂತಿ ಮುಹೂರ್ತದಲ್ಲಿ ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಹಾಲು ಉಕ್ಕಿಬರುವಂತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸುತ್ತಾಳೆ. ಈ ಬಾರಿ ಅಕ್ಟೋಬರ್ 17ರಂದು ಸಂಜೆ 6.43 ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಇದೇ ಕಾವೇರಿ ತೀರ್ಥೋದ್ಭವವಾಗಲಿದೆ.

ಕಾವೇರಿಯ ಉಗಮಸ್ಥಾನ ತಲಕಾವೇರಿಯು ಮಡಿಕೇರಿಯಿಂದ ನಲವತ್ತೆರಡು ಕಿ.ಮೀ. ದೂರದ ಬ್ರಹ್ಮಗಿರಿಯ ಬೆಟ್ಟಶ್ರೇಣಿಯಲ್ಲಿದ್ದು, ಸಮುದ್ರಮಟ್ಟದಿಂದ ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿದೆ. ಮನಮೋಹಕ ನಿಸರ್ಗ ಸಿರಿಯನ್ನು ಹೊಂದಿರುವ ತಲಕಾವೇರಿ ಪವಿತ್ರಕ್ಷೇತ್ರವಾಗಿಯೂ, ಕೊಡಗಿನ ಪ್ರಮುಖ ಪ್ರವಾಸಿ ತಾಣವಾಗಿಯೂ ಗಮನಸೆಳೆದಿದೆ. ವರ್ಷಕ್ಕೊಮ್ಮೆ ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಸಂಕ್ರಾಂತಿ ಮುಹೂರ್ತದಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಹಾಲು ಉಕ್ಕಿಬರುವಂತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸುತ್ತಾಳೆ. ಇದೇ ಕಾವೇರಿ ತೀರ್ಥೋದ್ಭವ. ಜಿಲ್ಲೆ, ರಾಜ್ಯ ಮಾತ್ರವಲ್ಲದೆ, ದೇಶದ ವಿವಿಧ ಕಡೆಗಳಿಂದ ಸಹಸ್ರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಈ ದಿವ್ಯ ಕ್ಷಣಕ್ಕೆ ಸಾಕ್ಷಿಯಾಗುತ್ತಾರಲ್ಲದೆ, ಕಾವೇರಿ ತೀರ್ಥದಲ್ಲಿ ಸ್ನಾನಮಾಡಿ ಪುನೀತರಾಗುತ್ತಾರೆ.

ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರಹರಿದು ಬಳಿಕ ಕರ್ನಾಟಕದಲ್ಲಿ ಸುಮಾರು 381ಕಿ.ಮೀ. ಹರಿದು ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802ಕಿ.ಮೀ. ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುವುದರೊಂದಿಗೆ ತಾನು ಹರಿದಲೆಲ್ಲಾ ಪವಿತ್ರಕ್ಷೇತ್ರಗಳನ್ನು ಸೃಷ್ಟಿಸಿ, ಲಕ್ಷಾಂತರ ಮಂದಿಯ ಪಾಲಿಗೆ ಅನ್ನದಾತೆಯಾಗಿದ್ದಾಳೆ.

ತೀರ್ಥೋದ್ಭವದಂದು ದೂರದೂರುಗಳಿಂದ ಆಗಮಿಸುವ ಭಕ್ತರು ಕಾವೇರಿಯ ಪವಿತ್ರ ಜಲತೀರ್ಥವನ್ನು ಮನೆಗೆ ಕೊಂಡೊಯ್ದು ಪೂಜಿಸುತ್ತಾರೆ.

ತಲಕಾವೇರಿಯಲ್ಲಿ ಬ್ರಹ್ಮಕುಂಡಿಕೆಯ ಪಕ್ಕದಲ್ಲಿಯೇ ಸ್ನಾನಕೊಳವಿದ್ದು, ಈ ಸ್ನಾನಕೊಳದಲ್ಲಿ ನೂತನವಾಗಿ ವಿವಾಹವಾದವರು ಕೈಕೈ ಹಿಡಿದುಕೊಂಡು ನೀರಿನಲ್ಲಿ ಮೂರು ಬಾರಿ ಮುಳುಗಿ ತಲೆಗೆ ಪವಿತ್ರ ಜಲವನ್ನು ಹಾಕಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ. ಇನ್ನು ಇಲ್ಲಿ ಗಣಪತಿ, ಅಗಸ್ತ್ಯೇಶ್ವರ ದೇವಾಲಯ ಹಾಗೂ ಜ್ಯೋತಿ ಮಂಟಪವಿದೆ. ಈ ಕ್ಷೇತ್ರವನ್ನು ಕೆಲವು ವರ್ಷಗಳ ಹಿಂದೆಯಷ್ಟೇ ಜೀರ್ಣೋದ್ಧಾರ ಮಾಡಲಾಗಿದ್ದು, ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದೆ.

ಇನ್ನು ತಲಕಾವೇರಿಗೆ ಹೋಗುವವರು ಭಾಗಮಂಡಲಕ್ಕೆ ತೆರಳಿ ಭಗಂಡೇಶ್ವರನಿಗೆ ಪೂಜೆ ಮಾಡಿ ಬಳಿಕ ತಲಕಾವೇರಿಗೆ ತೆರಳುತ್ತಾರೆ. ಭಾಗಮಂಡಲವು ತ್ರಿವೇಣಿ ಸಂಗಮವಾಗಿದ್ದು, ಇಲ್ಲಿ ಭಗಂಡೇಶ್ವರ, ಶಿವ, ಸುಬ್ರಹ್ಮಣ್ಯ, ವಿಷ್ಣು, ಗಣಪತಿ ದೇವಾಲಯಗಳಿವೆ.

ಭಗಂಡ ಮಹರ್ಷಿ ತಪಸ್ಸು ಮಾಡಿದ ಸ್ಥಳವಾದುದರಿಂದ ಭಾಗಮಂಡಲ ಎಂಬ ಹೆಸರು ಬಂತು ಎನ್ನಲಾಗಿದೆ. ಭಾಗಮಂಡಲವನ್ನು ದಕ್ಷಿಣದ ಕಾಶಿ ಎಂಬುವುದಾಗಿಯೂ ಕರೆಯುತ್ತಾರೆ. ಕಾವೇರಿ ತೀರ್ಥೋದ್ಭವದ ಸಮಯದಲ್ಲಿ ಭಾಗಮಂಡಲ ಜನಸಂದಣಿಯಿಂದ ಕೂಡಿರುತ್ತದೆ. ಈ ಸಂದರ್ಭ ಹಿರಿಯರಿಗೆ ಪಿಂಡ ಪ್ರದಾನ ಮಾಡುವ ಕಾರ್ಯವೂ ನಡೆಯುತ್ತದೆ. ತುಲಾಸಂಕ್ರಮಣದ ಒಂದು ತಿಂಗಳ ಕಾಲ ಭಗಂಡೇಶ್ವರ ದೇವಾಲಯದ ಕೊಠಡಿಯೊಂದರಲ್ಲಿ ನಂದಾದೀಪ ಉರಿಸಲಾಗುತ್ತದೆ. ಭಕ್ತರು ತಾವು ತರುವ ತುಪ್ಪವನ್ನು ಈ ದೀಪಕ್ಕೆ ಹಾಕುತ್ತಾರೆ. ಹಾಗೆಯೇ ಅಕ್ಕಿಯನ್ನು ಕೂಡ ಇಲ್ಲಿನ ಅಕ್ಷಯ ಭಂಡಾರಕ್ಕೆ ಹಾಕಿ ತಮ್ಮ ಮನೆಯ ಕಣಜದಲ್ಲಿ ಸದಾ ಭತ್ತ ತುಂಬಿರುವಂತೆ ಬೇಡಿಕೊಳ್ಳುತ್ತಾರೆ.

See also  ಗೌರಿ-ಗಣೇಶ ಹಬ್ಬದ ನಂತರ ಬಸ್ ಪ್ರಯಾಣ ದರ ಹೆಚ್ಚಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು