ಮಾಗಡಿ: ತಾಲೂಕಿನ ಮಾಡಬಾಳ್ ಮುಖ್ಯರಸ್ತೆಯಲ್ಲಿರುವ ಐತಿಹಾಸಿಕ ಇಮ್ಮಡಿ ಕೆಂಪೇಗೌಡರ ಪತ್ನಿ ಭರ್ಗಾವತಿ ಹೆಸರಿನಲ್ಲಿ ನಿರ್ಮಿಸಿರುವ ಕೆರೆಗೆ ಪಟ್ಟಣದ ಒಳಚರಂಡಿ ನೀರು (ಕಲುಷಿತ) ಸೇರುತ್ತಿದ್ದು, ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ
ಮಾಗಡಿ ಪಟ್ಟಣದ ಒಳಚರಂಡಿ ನೀರು ಸಂಗ್ರಹಿಸುವ ಕೇಂದ್ರವನ್ನು ಭರ್ಗಾವತಿ ಕೆರೆ ಸಮೀಪ ಸ್ಥಾಪಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಕಾರಣ ಒಳಚರಂಡಿ ನೀರು ಸರಾಗವಾಗಿ ಹೋಗದೆ ಎಲ್ಲೆಂದರಲ್ಲಿ ಉಕ್ಕಿ ಹರಿಯುತ್ತಿದ್ದು ಭರ್ಗಾವತಿ ಕೆರೆ ಬಳಿ ಕೆರೆಗೆ ಸೇರುತ್ತಿದೆ.
ಇದರಿಂದ ಶುದ್ಧವಾಗಿರುವ ಕೆರೆ ಈಗ ಮಲೀನಗೊಳ್ಳುತ್ತಿದ್ದು, ಕೆರೆಯಲ್ಲಿರುವ ಜಲಚರ ಪ್ರಾಣಿಗಳಿಗೂ ಹಾಗೂ ನೀರಿಗೂ ಅಪಾಯ ಎದುರಾಗಿದ್ದು ಈ ಬಗ್ಗೆ ಪುರಸಭೆಗೆ ಹಾಗೂ ನೇತೇನಹಳ್ಳೀ ಗ್ರಾಮ ಪಂಚಾಯಿತಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಸುರಿದ ಭಾರೀ ಮಳೆಗೆ ಕೆರೆ ತುಂಬಿದ್ದು ಕೆರೆಯಲ್ಲಿ ಮೀನನ್ನು ಬಿಟ್ಟು ಸಾಕಲಾಗುತ್ತಿದೆ. ಈಗ ಕಲುಷಿತ ನೀರು ಸೇರುತ್ತಿರುವುದರಿಂದ ಮೀನುಗಳ ಜೀವಕ್ಕೆ ಕುತ್ತಾಗುವ ಸಾಧ್ಯತೆಗಳು ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ. ಪರಂಗಿಚಿಕ್ಕನಪಾಳ್ಯಕ್ಕೆ ಸರಬರಾಜು ಮಾಡುತ್ತಿರುವ ಕೊಳವೆ ಬಾವಿಗೂ ಒಳಚರಂಡಿ ನೀರು ಸೇರುತ್ತಿದ್ದು ಈ ನೀರನ್ನು ಬಳಸದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ವತಿಯಿಂದ ಈ ಗ್ರಾಮದಲ್ಲಿ ಶುದ್ಧ ನೀರು ಘಟಕ ಸ್ಥಾಪಿಸಿ ಶುದ್ಧ ನೀರು ನೀಡುವ ಕೆಲಸವನ್ನು ಮಾಡಬೇಕಾಗಿದೆ. ಕೆಂಪೇಗೌಡರು ಕಟ್ಟಿಸಿರುವ ಐತಿಹಾಸಿಕ ಕೆರೆಯನ್ನು ಉಳಿಸುವ ಕೆಲಸ ಅಧಿಕಾರಿಗಳು ಮಾಡಬೇಕಾಗಿದ್ದು ಒಳಚರಂಡಿ ನೀರು ಸೇರುವುದನ್ನು ಕೂಡಲೇ ತಪ್ಪಿಸಬೇಕೆಂದು ಮಾಡಬಾಳ್ ಪರಂಗಿಚಿಕ್ಕನಪಾಳ್ಯ, ನೇತೇನಹಳ್ಳೀ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಹಿಂದೆ ರೈತ ಸಂಘದ ವತಿಯಿಂದ ಭರ್ಗಾವತಿ ಕೆರೆಗೆ ಸೇರುತ್ತಿರುವ ಕಲುಷಿತ ನೀರನ್ನು ನಿಲ್ಲಿಸಿ ಎಂದು ಪುರಸಭೆ ವಿರುದ್ದ ಪ್ರತಿಭಟನೆ ನಡೆಸಲಾಗಿತ್ತು.
ಈ ವೇಳೆ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಒಳಚರಂಡಿ ನೀರು ಕೆರೆಗೆ ಸೇರದಂತೆ ಎಚ್ಚರಿಕೆ ವಹಿಸಲಾಗುತ್ತದೆಂದು ಭರವಸೆ ಕೊಟ್ಟಿದ್ದರೂ ಈಗ ಮತ್ತೆ ಒಳಚರಂಡಿ ನೀರು ಸೇರುತ್ತಿದ್ದು ಕೂಡಲೇ ಶಾಶ್ವತವಾಗಿ ಕಾಮಗಾರಿಯನ್ನು ಮುಗಿಸಿ ಕಲುಷಿತ ನೀರು ಕೆರೆಗೆ ಸೇರದಂತೆ ಎಚ್ಚರವಹಿಸಬೇಕೆಂದು ಹಸಿರು ಸೇನೆ ತಾಲೂಕು ಅಧ್ಯಕ್ಷ ಲೋಕೇಶ್ ಮನವಿ ಮಾಡಿದ್ದಾರೆ.