ದೇವಿಕೆರೆಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ತೆಪ್ಪೋತ್ಸವ ನಿನ್ನೆ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ತೆಪ್ಪೋತ್ಸವಕ್ಕೂ ಮುನ್ನ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಸಹಸ್ರಾರು ಭಕ್ತರು ಪಾಲ್ಗೊಂಡು ತೆಪ್ಪೋತ್ಸವವನ್ನು ಕಣ್ತುಂಬಿಸಿಕೊಂಡರಲ್ಲದೇ ತಾಯಿಯ ಕೃಪೆಗೆ ಪಾತ್ರರಾದರು. ನಿನ್ನೆ ಬೆಳಿಗ್ಗೆ ತಾಯಿಗೆ ತೀರ್ಥಸ್ನಾನ ಹಾಗೂ ನೈವೇದ್ಯ ಕಾರ್ಯಕ್ರಮಗಳು ಜರುಗಿದವು.
ಸಂಜೆ ದೇವಿಕೆರೆಯಲ್ಲಿ ಪ್ರಾರಂಭವಾದ ತೆಪ್ಪೋತ್ಸವದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿಸಿ ಸ್ವಸ್ಥಾನಕ್ಕೆ ತರಲಾಗಿದ್ದು, ಬಳಿಕ ಮಹಾಮಂಗಳಾರತಿ ಸಲ್ಲಿಸಲಾಯಿತು.ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಂದು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಬಣ್ಣ ಬಣ್ಣದ ವಿದ್ಯುದ್ದೀಪಾಲಂಕಾರದಲ್ಲಿ ತಾಯಿ ಕಂಗೊಳಿಸುತ್ತಿದ್ದಳು. ಭಕ್ತರು ತಾಯಿಗೆ ಜೈಕಾರ ಹಾಕಿ ತಮ್ಮ ಮನೋಭಿಲಾಷೆ ನೆರವೇರಿಸುವಂತೆ ಪ್ರಾರ್ಥಿಸಿದರು. ತೆಪ್ಪೋತ್ಸವದ ಮೂಲಕ ದೇವಿಯ ರಥೋತ್ಸವ ಮುಕ್ತಾಯಗೊಂಡಿತು. ಹಲವರು ತಮ್ಮ ಮೊಬೈಲ್ ಗಳಲ್ಲಿ ತಾಯಿಯ ತೆಪ್ಪೋತ್ಸವ ದೃಶ್ಯವನ್ನು ಸೆರೆ ಹಿಡಿಯುತ್ತಿರುವುದು ಕಂಡು ಬಂತು.