ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಶೇ. 53ರಷ್ಟು ಮತದಾನವಾಗಿದೆ. ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ಮಳವಳ್ಳಿ, ಮದ್ದೂರು, ಮೇಲುಕೋಟೆ ಹಾಗೂ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಗಳು ಸೇರಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಒಟ್ಟು 16,84,446 ಮತದಾರರ ಪೈಕಿ 8,92,756 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮಂಡ್ಯ ಕ್ಷೇತ್ರ – ಶೇ. 47.18, ಶ್ರೀರಂಗಪಟ್ಟಣ – ಶೇ. 54.40, ಮೇಲುಕೋಟೆ – ಶೇ.57.75, ಕೆ.ಆರ್.ಪೇಟೆ – ಶೇ.51.75 , ನಾಗಮಂಗಲ – ಶೇ. 56.30, ಮದ್ದೂರು – ಶೇ. 57.25, ಮಳವಳ್ಳಿ ಶೇ. 47.10 ಹಾಗೂ ಕೃಷ್ಣರಾಜ ನಗರ ಕ್ಷೇತ್ರದಲ್ಲಿ ಶೇ. 46.87ರಷ್ಟು ಮತದಾನ ನಡೆದಿದೆ.
ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಯಿತಾದರೂ, ಜನತೆ ಅಷ್ಟೇನೂ ಆಸಕ್ತಿ ತೋರದ ಕಾರಣ 11 ಗಂಟೆಯಾದರೂ ಶೇ. 13.35 ಹಾಗೂ ಮಧ್ಯಾಹ್ನ 1 ಗಂಟೆಗೆ ಶೇ. 26.74 ರಷ್ಟು ಮಾತ್ರ ಮತದಾನವಾಗಿತ್ತು. ನಂತರ ಸ್ವಲ್ವ ವೇಗ ಪಡೆದು ಸಂಜೆ 4 ಗಂಟೆಗೆ ಶೇ. 37.07ರಷ್ಟು ಆಯಿತು. ಸಂಜೆ 5 ಗಂಟೆಗೆ 48.6ರಷ್ಟು ಮತದಾನವಾಗಿತ್ತು.
ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 57.75ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಸ್ಟ್ರಾಂಗ್ ರೂಂನಲ್ಲಿ ಮತಯಂತ್ರಗಳು ಭದ್ರ
ಜಿಲ್ಲಾದ್ಯಂತ ಮತದಾನ ಮುಗಿದ ಹಿನ್ನೆಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದಲ್ಲಿರಿಸಲಾಗಿದೆ.
ಚುನಾವಣಾ ಸಿಬ್ಬಂದಿ ತಂದ ಮತಯಂತ್ರಗಳನ್ನು ಡಿ ಮಸ್ಟರಿಂಗ್ ನಂತರ ತಾಲೂಕುವಾರು ಮತಯಂತ್ರಗಳನ್ನು ಪ್ರತ್ಯೇಕ ಸ್ಟ್ರಾಂಗ್ ರೂಂಗಳಲ್ಲಿರಿಸಿ ಭದ್ರಗೊಳಿಸಲಾಗಿದೆ.