ಮಂಡ್ಯ: ಬೈಕ್, ಕಾರು ಮತ್ತು ಟೆಂಪೋ ಟ್ರಾವೆಲ್ಸ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ತಾಲೂಕಿನ ಸಿದ್ದಯ್ಯನಕೊಪ್ಪಲು ಗೇಟ್ ಬಳಿ ಬುಧವಾರ ಮುಂಜಾನೆ ನಡೆದಿದೆ.
ತಾಲೂಕಿನ ಇಂಡುವಾಳು ಗ್ರಾಮದ ಮಾದೇಶ(45) ಹಾಗೂ ಜೇಮ್ಸ್(30) ಎಂಬುವರೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಮಾದೇಶ ಹಾಗೂ ಜೇಮ್ಸ್ ಇಬ್ಬರು ಗಾರೆ ಕೆಲಸ ಮಾಡಿಕೊಂಡಿದ್ದು, ಕೆಲಸಕ್ಕೆಂದು ಸಿದ್ದಯ್ಯನಕೊಪ್ಪಲು ಗೇಟ್ ಬಳಿಯಿಂದ ಮುಖ್ಯರಸ್ತೆ ಕಡೆಗೆ ಬೈಕನ್ನು ತಿರುಗಿಸಿದ್ದಾರೆ. ಈ ವೇಳೆ ಮೈಸೂರು ಕಡೆಯಿಂದ ಬರುತ್ತಿದ್ದ ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಮಾದೇಶ ಮತ್ತು ಜೇಮ್ಸ್ ತೀವ್ರವಾಗಿ ಗಾಯಗೊಂಡರು. ಹಿಂದಿನಿಂದ ಅತಿ ವೇಗವಾಗಿ ಬರುತ್ತಿದ್ದ ಟೆಂಪೋ ಟ್ರಾವೆಲರ್ ಮಾದೇಶ ಮತ್ತು ಜೇಮ್ಸ್ ಮೇಲೆ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಶವಗಳನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದರು. ಮುಂಜಾನೆ ನಡೆದ ಸರಣಿ ಅಪಘಾತದಿಂದಾಗಿ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳ ಸಾಲು ಕಂಡುಬಂತು. ಸಂಚಾರ ಸರಿದಾರಿಗೆ ತರಲು ಪೊಲೀಸರು ಸತತವಾಗಿ ಎರಡು ಗಂಟೆಗೂ ಹೆಚ್ಚು ಕಾಲ ಪರದಾಡುವಂತಾಗಿತ್ತು.