–ಮೈಸೂರು: ಮಕ್ಕಳಿಗೆ ಪಾಠ ಮಾಡಿ ಸಮಾಜದಲ್ಲಿ ಸರಿ ದಾರಿಗೆ ತರಬೇಕಾದ ಶಿಕ್ಷಕನೇ, ಕಳ್ಳತನಕ್ಕಿಳಿದು, ಮೂರೇ ದಿನದಲ್ಲಿ ಸಿಕ್ಕಿ ಬಿದ್ದಿದ್ದಾನೆ. ರಾಜೀವ್ನಗರದ ಮನೆಯೊಂದರಲ್ಲಿ ೨೫ ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜೀವ್ನಗರದ ೧ನೇ ಹಂತದ ನಿವಾಸಿ ಹಾಗೂ ಶಾಲಾ ಶಿಕ್ಷಕ ಸೈಯದ್ ತಜಮುಲ್(೩೧) ಬಂಧಿತ ಖದೀಮ. ರಾಜೀವ್ನಗರದ ನಿವಾಸಿ ಎನ್.ಐ.ಕಾವೇರಿ ಎಂಪೋರಿಯಂ ಮಾಲೀಕ ಇಲಿಯಾಸ್ ಬೇಗ್ ಅವರ ಮಗಳ ಮದುವೆಗೆಂದು ನ.೧೭ರಂದು ನಗರದ ಖಾಸಗಿ ಹೋಟೆಲ್ ನಲ್ಲಿ ಗೆ ಕುಟುಂಬ ಸಮೇತ ಹೋಗಿದ್ದರು. ಮೊದಲೇ ಇವರ ಮನೆಯ ಕೀ ಕದ್ದು ಇಟ್ಟುಕೊಂಡಿದ್ದ ಈತ, ಅದೇ ಸಮಯವನ್ನೇ ಕಾಯುತ್ತಿದ್ದ. ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕೀ ಬಳಸಿ ಒಳನುಗಿದ್ದ ಸೈಯದ್ ತಜಮುಲ್ ಕಬೋರ್ಡ್ ನಲ್ಲಿದ್ದ ೨೫ ಲಕ್ಷ ರೂ ಮೌಲ್ಯದ ೬೩೯ ಗ್ರಾಂ ಚಿನ್ನಾಭರಣ ಮತ್ತು ೧ ಲಕ್ಷ ರೂ. ಕದ್ದು ಪರಾರಿಯಾಗಿದ್ದ.
ಕದ್ದ ಚಿನ್ನಾಭರಣವನ್ನು ಗುಂಡ್ಲುಪೇಟೆಯ ಸಿಂಡಿಕೇಟ್ ಬ್ಯಾಂಕ್ನಲ್ಲಿ ಖಾತೆ ತೆರೆದು ಸೇಫ್ ಲಾಕರ್ ಪಡೆದು ಬಚ್ಚಿಟ್ಟಿದ್ದ.
ಈತನನ್ನು ಬಂಧಿಸಿ ಪೊಲೀಸರು ೨೫ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ೬೦ ಸಾವಿರ ನಗದನ್ನು ವಶಕ್ಕೆ ಪಡೆದುಕೊಂಡು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.