ಮಂಡ್ಯ: ಎಲ್ಲೆಡೆ ಜಗಮಗಿಸುವ ವಿದ್ಯುತ್ ದೀಪಗಳು.. ಕಣ್ಣು ಹಾಯಿಸಿದುದ್ದಕ್ಕೂ ಅಲೆಯಾಡುವ ನೀರು ಅದರ ನಡುವೆ ತೇಲುವ ವೇದಿಕೆ ಅದರಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಅದನ್ನು ನೋಡಿ ಸಂಭ್ರಮಿಸಿದ ಪ್ರೇಕ್ಷಕರು.. ಇದು ಮಂಡ್ಯದ ಪಾಂಡವಪುರ ತಾಲೂಕಿನ ಕೆರೆತೊಣ್ಣೂರಲ್ಲಿ ನಡೆದ ಕೆರೆ ಉತ್ಸವದಲ್ಲಿ ಕಂಡು ಬಂದ ಸುಂದರ ದೃಶ್ಯಗಳು.
ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆರೆತೊಣ್ಣೂರಲ್ಲಿ ಕೆರೆ ಉತ್ಸವವನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತಿದ್ದು, ಶುಕ್ರವಾರ ರಾತ್ರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿದ್ಯುಕ್ತ ಚಾಲನೆ ನೀಡಿದ್ದಾರೆ.
ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ರಸ್ತೆ ಮಾರ್ಗವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಆಗಮಿಸಿದಾಗ ಹಲವು ಗ್ರಾಮಗಳಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಕೆರೆ ತೊಣ್ಣೂರು ಗ್ರಾಮಕ್ಕೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ ಅವರು, ತೊಣ್ಣೂರು ಕೆರೆಯಲ್ಲಿ ವಿಶೇಷವಾಗಿ ನಿರ್ಮಿಸಿದ್ದ ತೇಲುವ ಬೃಹತ್ ವೇದಿಕೆ ಮೇಲೇರಿ ರಾತ್ರಿ 9.10ಕ್ಕೆ ತೊಣ್ಣೂರು ಕೆರೆಗೆ ಗಂಗಾರತಿ ಬೆಳಗುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ವಹಿಸಿದ್ದರು. ಸಚಿವರಾದ ಡಿ.ಸಿ.ತಮ್ಮಣ್ಣ, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಂಸದ ಎಲ್.ಆರ್. ಶಿವರಾಮೇಗೌಡ, ಶಾಸಕರಾದ ಎಂ.ಶ್ರೀನಿವಾಸ್, ಕೆ.ಸುರೇಶ್ಗೌಡ, ರವೀಂದ್ರ ಶ್ರೀಕಂಠಯ್ಯ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಭಾಗವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಖ್ಯಾತ ಗಾಯಕ ವಿಜಯ ಪ್ರಕಾಶ್ ತಂಡದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಸಸಂಜೆ ಕಾರ್ಯಕ್ರಮ ವೀಕ್ಷಿಸಿದ ಪ್ರವಾಸಿಗರು ಕುಣಿದು ಕುಪ್ಪಳಿಸಿದರು.
ಶುಕ್ರವಾರ ರಾತ್ರಿ ಆರಂಭಗೊಂಡ ಕೆರೆ ಉತ್ಸವ ಮೂರು ದಿನಗಳ ಕಾಲ ನಡೆಯಲಿದ್ದು ಭಾನುವಾರ ಉತ್ಸವದ ಸಮಾರೋಪ ಸಮಾರಂಭ ನಡೆಯಲಿದೆ.
ಜಲಪಾತೋತ್ಸವವನ್ನು ಆಚರಿಸುವ ಮೂಲಕ ಸುಂದರ ರಸಸಂಜೆಯನ್ನು ಜನಕ್ಕೆ ಉಣಬಡಿಸಿದ ಸರ್ಕಾರ ಇದೀಗ ಕೆರೆ ಉತ್ಸವದ ಮೂಲಕ ಗಮನಸೆಳೆಯುತ್ತಿದೆ. ಈ ಉತ್ಸವವನ್ನು ಮುಂದೆಯೂ ಆಚರಿಸಿಕೊಂಡು ಹೋಗಲು ಸರ್ಕಾರ ನಿರ್ಧರಿಸಿದೆ.