ಕೆ.ಆರ್.ಪೇಟೆ: ಬೀದಿ ನಾಯಿಗಳ ಗುಂಪೊಂದು ಬಾಲಕನ ಮೇಲೆ ದಾಳಿ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿರುವ ಘಟನೆ ಪಟ್ಟಣದ ಮುಸ್ಲಿಂ ಬ್ಲಾಕ್ ಬಡಾವಣೆಯಲ್ಲಿ ನಡೆದಿದೆ.
ಕೋರಮಂಡಲ್ ಸಕ್ಕರೆ ಕಾರ್ಖಾನೆಯ ನೌಕರ ಗಿರೀಶ್ ಅವರ ಪುತ್ರ ಒಂದನೇ ತರಗತಿಯಲ್ಲಿ ಓದುತ್ತಿರುವ ಸಮರ್ಥ್(6) ಎಂಬಾತನೇ ಬೀದಿ ನಾಯಿಗಳ ದಾಳಿಗೊಳಗಾದ ಬಾಲಕ.
ಬಾಲಕ ಸಮರ್ಥ್ ಆಶೀರ್ವಾದ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಗಳು ಕೆನ್ನೆ ಕೈಕಾಲುಗಳು ಸೇರಿದಂತೆ ಸಿಕ್ಕ-ಸಿಕ್ಕ ಕಡೆ ಕಚ್ಚಿದೆ.
ಬಾಲಕ ಕಿರುಚಿದ ವೇಳೆ ಮನೆಯವರು ಸೇರಿದಂತೆ ಅಕ್ಕಪಕ್ಕದವರು ಬಂದು ನಾಯಿಯನ್ನು ಓಡಿಸಿದ್ದಾರೆ. ಬಳಿಕ ಗಂಭೀರ ಗಾಯಗಳಿಂದ ಅಸ್ವಸ್ಥಗೊಂಡಿದ್ದ ಬಾಲಕ ಸಮರ್ಥ್ನನ್ನು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕೋಳಿ ಮತ್ತು ಮಾಂಸದ ಅಂಗಡಿಗಳಿದ್ದು ಇದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಅವುಗಳನ್ನು ನಿಯಂತ್ರಿಸುವ ಕೆಲಸ ಮಾಡದ ಹಿನ್ನೆಲೆಯಲ್ಲಿ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.