ಪಿರಿಯಾಪಟ್ಟಣ: ನಾವು ಉಪಯೋಗಿಸುವ ಆಹಾರ ಪದಾರ್ಥಗಳ ಪೈಕಿ ಹೆಚ್ಚಿನವುಗಳು ಪ್ರಕೃತಿಯಲ್ಲೇ ದೊರೆಯುತ್ತವೆ. ಹಿಂದಿನ ಕಾಲದಲ್ಲಿ ಹೆಚ್ಚಿನವರು ಕಾಡಿನಲ್ಲಿ ದೊರೆಯುತ್ತಿದ್ದ ಗೆಡ್ಡೆಗೆಣಸು, ಕಾಯಿ, ಹಣ್ಣು, ಸೊಪ್ಪುಗಳನ್ನು ತಮ್ಮ ಆಹಾರಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದರು.
ಇವತ್ತು ಹಲವಷ್ಟು ಆರೋಗ್ಯದಾಯಕ ಆಹಾರ ಪದಾರ್ಥಗಳಾದ ಸೊಪ್ಪು, ತರಕಾರಿ, ಗೆಡ್ಡೆಗೆಣಸು, ಹಣ್ಣುಗಳು ಸದ್ದಿಲ್ಲದೆ ನಶಿಸಿಹೋಗುತ್ತಿವೆ. ಇದಕ್ಕೆ ಅರಣ್ಯ ನಾಶ ಮತ್ತು ಅರಣ್ಯ ಉತ್ಪನ್ನಗಳತ್ತ ನಿರ್ಲಕ್ಷ್ಯ ವಹಿಸುತ್ತಿರುವುದೇ ಕಾರಣ ಎಂದರೆ ತಪ್ಪಾಗಲಾರದು.
ಹಿಂದಿನ ಕಾಲದಲ್ಲಿ ಯಾವುದೇ ಬೆಳೆ ಬೆಳೆದರೂ ಅದರ ಬೀಜವನ್ನು ಸಂಗ್ರಹಿಸಿಡುವ ಅಭ್ಯಾಸವಿತ್ತು. ಉತ್ತಮ ಫಸಲು ನೀಡುವ ಯಾವುದೇ ಬೆಳೆಯಾಗಲಿ ಅದರ ಬೀಜವನ್ನು ಪೋಷಿಸಿ ಸಂಗ್ರಹಿಸಿಡುತ್ತಿದ್ದರಲ್ಲದೆ, ಅದೇ ಬೀಜದಿಂದ ಮುಂದಿನ ವರ್ಷ ಬೆಳೆ ಬೆಳೆಯುತ್ತಿದ್ದರು. ಬದಲಾದ ಕಾಲದಲ್ಲಿ ಬೀಜಗಳನ್ನು ಸಂಗ್ರಹಿಸಿಡುವ ಸಂಪ್ರದಾಯ ಬದಲಾಗಿದೆ. ಎಲ್ಲದಕ್ಕೂ ಕಂಪೆನಿ ಬೀಜಗಳನ್ನು ಅವಲಂಬಿಸುವಂತಾಗಿದೆ. ಇದು ವಿಷಾದದ ಸಂಗತಿಯಾಗಿದೆ.
ನಮ್ಮ ಸೋಮಾರಿತನ ಮತ್ತು ದೇಸಿ ಬೀಜಗಳ ಮೇಲಿನ ತಾತ್ಸಾರ, ನಿರ್ಲಕ್ಷ್ಯದಿಂದಾಗಿ ನಾವು ಇವತ್ತು ಹಲವು ದೇಸಿ ಗೆಡ್ಡೆ, ಗೆಣಸು, ತರಕಾರಿಗಳನ್ನು ಕಳೆದುಕೊಂಡಿದ್ದೇವೆ. ಮುಂದೆ ಇದೇ ರೀತಿ ಮುಂದುವರಿದರೆ ಹಲವು ಅತ್ಯುತ್ತಮವಾದ ಸಸ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ.
ಇದನ್ನು ಮನಗಂಡ ಮೈಸೂರಿನ ಸಹಜ ಸಮೃದ್ಧ, ಮಾಲಂಗಿ ಗ್ರಾಮ ಪಂಚಾಯಿತಿ ಮತ್ತು ಆಸಕ್ತ ಜೇನು ಕುರುಬ ಹಾಡಿಯ ಹೆಣ್ಣು ಮಕ್ಕಳು ತಮ್ಮ ಗ್ರಾಮದಲ್ಲೇ ದೇಸಿ ಬೀಜ ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ದೇಸಿ ಬೀಜಗಳ ಸಂರಕ್ಷಣೆ, ರೈತರಲ್ಲಿ ಬೀಜ ವಿನಿಮಯ ಉತ್ತೇಜನ, ಪರಂಪರಾಗತ ಜ್ಞಾನ ಹಾಗೂ ಸ್ಥಳೀಯ ಕೃಷಿ ಪರಂಪರೆ ಉತ್ತೇಜಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಷ್ಟೇ ಅದನ್ನು ನಾಟಿ ತಳಿಗಳ ಸಂಗ್ರಹಾಲಯವನ್ನಾಗಿ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ.
ತಮ್ಮ ಗ್ರಾಮದಲ್ಲಿ ಸ್ಥಾಪನೆಯಾಗಿರುವ ಬೀಜ ಬ್ಯಾಂಕ್‍ನ ಸಂಪೂರ್ಣ ನಿರ್ವಹಣೆಯನ್ನು ಜೇನು ಕುರುಬ ಹಾಡಿ ಹೆಣ್ಣು ಮಕ್ಕಳೇ ಜವಬ್ದಾರಿಯಿಂದ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಇನ್ನು ಈ ಬೀಜ ಬ್ಯಾಂಕ್ ಸ್ಥಾಪನೆ ಹಿಂದೆ ಮಾಲಂಗಿ ಗ್ರಾಮಪಂಚಾಯಿತಿಯ ಜನಪ್ರತಿನಿಧಿಗಳು ಮತ್ತು ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಶೋಭಾ ದಿನೇಶ್ ಮತ್ತು ವೈಶಿಷ್ಟ್ಯ. ಕಾನನ ಕೃಷಿಕ ಸಂಘ ಸ್ಥಾಪನೆ ಹಾಗೂ ಬೆಳವಣಿಗೆಯ ಹಿಂದಿನ ರೂವಾರಿಯಾಗಿರುವ ಕೃಷ್ಣಾಪ್ರಸಾದ್ ಗೋವಿಂದಯ್ಯ ಅವರೆಲ್ಲರ ಸಹಕಾರವಿರುವುದನ್ನು ಕಾಣಬಹುದು.
ಇವತ್ತು ಮಾಲಂಗಿ ಗ್ರಾಮದಲ್ಲಿ ಸ್ಥಾಪನೆಯಾಗಿರುವ ಬೀಜ ಬ್ಯಾಂಕ್ ಇತರರಿಗೂ ಮಾದರಿಯಾಗಿದ್ದು, ಉಳಿದ ಗ್ರಾಮಗಳಲ್ಲಿಯೂ ಇಂತಹದೊಂದು ಬೀಜ ಬ್ಯಾಂಕ್‍ಗಳು ಆರಂಭವಾದರೆ ಅಳಿದು ಹೋಗುವ ಬೀಜಗಳನ್ನು ರಕ್ಷಿಸಿಕೊಳ್ಳಬಹುದಲ್ಲದೆ, ಸ್ಥಳೀಯ ಬೀಜಗಳನ್ನೇ ಸಂರಕ್ಷಿಸಿಕೊಂಡು ಅದರಿಂದಲೇ ಕೃಷಿ ಮಾಡಲು ಸಾಧ್ಯವಾಗುತ್ತದೆ. ಜತೆಗೆ ಬೀಜಕ್ಕಾಗಿ ಎರಡರಷ್ಟು ಹಣತೆರಬೇಕಾದ ಅಗತ್ಯತೆಯೂ ಬರುವುದಿಲ್ಲ. ಜನ ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ.