ಮಾಲೂರು: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಅರಳೇರಿ ರಸ್ತೆಯಲ್ಲಿ ನಡೆದಿದೆ.
ರವೀಂದ್ರಗೌಡ ಎಂಬಾತನ ಪತ್ನಿ ಆರ್.ಅನುಷಾ(26) ಸಂಶಯಾಸ್ಪದವಾಗಿ ಮೃತಪಟ್ಟ ದುರ್ದೈವಿ. ಆಕೆಯ ಪೋಷಕರು ನೀಡಿದ ದೂರಿನ ಮೇರೆಗೆ ಮಾಲೂರು ಪೊಲೀಸರು ಪತಿ ರವೀಂದ್ರ ಗೌಡ, ಮಾವ ಪಾಪಣ್ಣ ಹಾಗೂ ಅತ್ತೆ ಲಕ್ಷಮ್ಮ ಅವರ ವಿರುದ್ಧ ವರದಕ್ಷಿಣೆ ಕಿರುಕಳ ಮತ್ತು ಕೊಲೆಯ ಪ್ರಕರಣ ದಾಖಲಿಸಿದ್ದಾರೆ.
ಮಾಲೂರು ಪಟ್ಟಣದ ಅರಳೇರಿ ರಸ್ತೆಯಲ್ಲಿನ ಪಾಪಣ್ಣನವರ ಎರಡನೇ ಮಗನಾಗಿದ್ದ ರವಿಕುಮಾರ್ ಅಲಿಯಾಸ್ ರವೀಂದ್ರ ಗೌಡ ಎಂಬಾತ ಕಳೆದ ಮೂರು ವರ್ಷಗಳ ಹಿಂದೆ ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಗುಡಿಸಾದನಪಲ್ಲಿ ಮಂಡಲಂ ವ್ಯಾಪ್ತಿಯ ಗೆದ್ದಲದೊಡ್ಡಿ ಗ್ರಾಮದ ನಿವಾಸಿ ಆರ್.ಅನುಷಾ ಎಂಬಾಕೆಯನ್ನು ಮದುವೆಯಾಗಿದ್ದನು.
ಈ ದಂಪತಿಗೆ 1 ವರ್ಷ ಮೂರು ತಿಂಗಳ ಗಂಡು ಮಗುವಿದ್ದು, ದಂಪತಿಗಳ ಮಧ್ಯೆ ಆಗಾಗ ಜಗಳ ನಡಯುತ್ತಿತ್ತು ಎನ್ನಲಾಗಿದೆ. ಈ ನಡುವೆ ಮನೆಯಲ್ಲಿ ಗಂಡ ಅತ್ತೆ ಮತ್ತು ಮಾವ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಅನುಷಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದು, ಆಸ್ವತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಗಂಡನ ಮನೆಯವರು ಆಕೆಯ ಪೋಷಕರಿಗೆ ತಿಳಿಸಿದ್ದರು.
ಪೋಷಕರು ಬರುವ ವೇಳೆಗೆ ಶವವನ್ನು ಮಾಲೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತಲ್ಲದೆ, ಆತ್ಮಹತ್ಯೆಗೆ ಅನುಷಾ ಅನುಭವಿಸುತ್ತಿದ್ದ ಅತಿಯಾದ ಹೊಟ್ಟೆನೋವು ಕಾರಣವಾಗಿದ್ದು, ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹೊಟ್ಟೆ ನೋವಿಗೆ ಚಿಕಿತ್ಸೆ ಕೊಡಿಸಿದ್ದರೂ ಫಲಕಾರಿಯಾಗದೆ ಜಿಗುಪ್ಸೆ ಹೊಂದಿ ಅನುಷಾ ಆತ್ಯಹತ್ಯೆ ಮಾಡಿಕೊಂಡಿರುವುದಾಗಿ ಗಂಡನ ಮನೆಯವರು ತಿಳಿಸಿದ್ದರು.
ಆದರೆ ಮಾಲೂರು ಸಾರ್ವಜನಿಕ ಆಸ್ಪ್ವತ್ರೆಯ ಶವಾಗಾರದಲ್ಲಿ ಮೃತ ಅನುಷಾಳ ಮೃತ ದೇಹವನ್ನು ಪರಿಶೀಲಿಸಿದ ಮೃತಳ ದೊಡ್ಡಪ್ಪ ಮತ್ತು ಕುಟುಂಬದವರು ಗಂಡ ರವೀಂದ್ರಗೌಡ, ಮಾವ ಪಾಪಣ್ಣ, ಅತ್ತೆ ಲಕ್ಷಮ್ಮ ಅವರು ವರದಕ್ಷಿಣಿಗಾಗಿ ಕಿರುಕಳ ನೀಡಿ ಕೊಲೆ ಮಾಡಿರುವುದಾಗಿ ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಮಾಲೂರು ಪೊಲೀಸರು ಶವ ಪರೀಕ್ಷೆಗಾಗಿ ಕೋಲಾರದ ಎಸ್‍ಎನ್‍ಆರ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆ ಬಳಿಕ ಮೃತಳ ಪತಿ, ಮಾವ, ಅತ್ತೆ ತಲೆಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.