ಮೈಸೂರು: ಕೇಂದ್ರ ಸರ್ಕಾರ 5 ವರ್ಷದ ಅವಧಿಯಲ್ಲಿ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಹೀಗಾಗಿ ಸರ್ಜಿಕಲ್ ಸ್ಟ್ರೈಕ್ ವಿಚಾರ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಶುಕ್ರವಾರ ಮೈಸೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬಡತನ, ನಿರುದ್ಯೋಗ, ರೈತರ ಸಮಸ್ಯೆಯಂತಹ ಗಂಭೀರ ವಿಚಾರಗಳ ಮೇಲೆ ಚುನಾವಣೆ ಎದುರಿಸದೆ ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಸರ್ಜಿಕಲ್ ಸ್ಟ್ರೈಕ್ನಿಂದ ತಮಗೆ ಲಾಭವಾಗಿದೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 12 ರಿಂದ 13 ಸರ್ಜಿಕಲ್ ಸ್ಟೈಕ್ ನಡೆದಿತ್ತು. ಆದರೆ ನಾವು ಅವತ್ತು ಅದ್ಯಾವುದನ್ನೂ ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ, ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ಬಾಂಗ್ಲಾ ಯುದ್ದದಲ್ಲಿ ಪಾಕಿಸ್ತಾನ ಶರಣಾಗಿದ್ದು ಎಲ್ಲರಿಗೂ ಗೊತ್ತಿದೆ. ಅದಕ್ಕಿಂತಲೂ ದೊಡ್ಡದಾ? ಈ ಸರ್ಜಿಕಲ್ ಸ್ಟೈಕ್ ಎಂದು ಪ್ರಶ್ನಿಸಿದ ಅವರು, ನಾವು ದೇಶದ ರಕ್ಷಣೆ ವಿಚಾರವನ್ನು ಎಂದೂ ರಾಜಕಾರಣಕ್ಕೆ ಬಳಸಿಕೊಂಡಿಲ್ಲ ಎಂದರು.
ಮೈಸೂರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹನ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ನಾನು ಮಹದೇವಪ್ಪ, ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿಪಡಿಸುವಾಗ ಪ್ರತಾಪ್ ಸಿಂಹ ಎಲ್ಲಿದ್ದ? ನಾವು ಮಾಡಿದ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ನಾನು ಪ್ರತಾಪ್ಸಿಂಹ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ಪ್ರತಾಪ್ ಸಿಂಹ ಮಾತ್ರವಲ್ಲ, ಬಿಜೆಪಿಯ ಯಾವ ಸಂಸದರೂ ಯಾವ ಕೆಲಸವನ್ನೂ ಮಾಡಿಲ್ಲ. ಏನೂ ಮಾಡದೆ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನಮ್ಮ ಚಾಮರಾಜನಗರ ಸಂಸದ ಧ್ರುವನಾರಾಯಣ್ ಅವರೊಂದಿಗೆ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯವರು ಚರ್ಚೆಗೆ ಬರುತ್ತಾರಾ? ಶೋಭ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ ಚರ್ಚೆಗೆ ಬರುತ್ತಾರಾ ಎಂದು ಕೇಳಿದರು.
ನಾನು 28 ಕ್ಷೇತ್ರದಲ್ಲೂ ಪ್ರಚಾರಕ್ಕೆ ಹೋಗುತ್ತೇನೆ. ಇದರಲ್ಲಿ ಮಂಡ್ಯ, ಹಾಸನ ಎಂಬುದನ್ನು ಪ್ರತ್ಯೇಕಿಸಬೇಡಿ. ನಾವು 20 ಸ್ಥಾನಗಳನ್ನು ಗೆಲ್ಲುತ್ತೇವೆ. ನಮ್ಮಲಿ ಯಾವುದೇ ಬಿರುಕ್ಕಿಲ್ಲ. ಹಾಗೆಯೇ ಎ.ಮಂಜು ಪಕ್ಷ ಬಿಡುವುದಿಲ್ಲ. ನಾನು ಅವರ ಜತೆ ಮಾತನಾಡಿದ್ದೇನೆ. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಹ ನಮ್ಮ ಜತೆಯಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದರು.