ಮೈಸೂರು: ಯುಗಾದಿ ಹಬ್ಬಕ್ಕೆ ಪ್ರಕೃತಿ ಹೇಗೆ ಸಿದ್ಧತೆ ಮಾಡಿಕೊಂಡಿರುತ್ತದೆಯೋ ಅದೇ ರೀತಿ ಜೆಎಸ್ಎಸ್ ಅರ್ಬನ್ ಹಾತ್ ಸಿದ್ದಗೊಂಡಿದೆ.
ಜಿಲ್ಲಾ ಮಟ್ಟದ ಗುಡಿ ಕೈಗಾರಿಕೆಗಳ ವಸ್ತುಪ್ರದರ್ಶನ ಮತ್ತು ಮಾರಾಟ ಹಾಗೂ ಸಿಲ್ಕ್ ಉತ್ಸವ 2019 ಕಾರ್ಯಕ್ರಮ ಮಾ.31ರವರೆಗೆ ವಿಶಿಷ್ಟವಾಗಿ ನಡೆಯಲಿದೆ. ಉತ್ಸವದಲ್ಲಿ ರೇಷ್ಮೆ ಸೀರೆಗಳು, ಸಾವಯವ ಕಾಟನ್ನಿಂದ ತಯಾರಿಸುವ ಸೀರೆಗಳು, ಕೈಮಗ್ಗದ ಸೀರೆಗಳು, ಮಧುಬನಿ ಸೀರೆಗಳು, ಕಾಂಜೀವರಂ ಸೀರೆಗಳ ಸಂಗ್ರಹ ಸಾಕಷ್ಟಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್, ಕೇರಳ, ತಮಿಳುನಾಡು ಮೊದಲಾದ ರಾಜ್ಯಗಳ ಸಾಂಪ್ರದಾಯಿಕ ಕುಶಲಕರ್ಮಿಗಳು ತಯಾರಿಸಿದ ಸೀರೆಗಳು, ಡ್ರೆಸ್ ಮೆಟೀರಿಯಲ್ಗಳು ಇವೆ. ಇವುಗಳ ಜತೆಗೆ ಎಂಬ್ರಾಯ್ಡರಿ ಸೀರೆಗಳು, ಡ್ರೆಸ್ಗಳು, ಬಾಟಿಕ್ ಸೀರೆಗಳು ಕೂಡ ಲಭ್ಯವಿವೆ. ಏಪ್ರಿಲ್ನ ಬಿಸಿಲಿನ ವಾತಾವರಣದಲ್ಲಿ ಮೈಗೆ ತಂಪನ್ನೀಯುವ ಖಾದಿ ಸೀರೆಗಳು, ಖಾದಿ ದಿರಿಸುಗಳು ಲಭ್ಯವಿವೆ. ಕೈಮಗ್ಗ ವಸ್ತ್ರಗಳು, ಕೈಮಗ್ಗದ ರೇಷ್ಮೆ ಮತ್ತು ಕಾಟನ್ ಸೀರೆಗಳು, ಕೈಮಗ್ಗದ ಹೊದಿಕೆಗಳು, ವಿವಿಧ ಲೋಹ, ಜರಿ ಕಸೂತಿಗಳು, ಸಿದ್ಧ ಉಡುಪುಗಳು ಒಂದೇ ಸೂರಿನಡಿ ಲಭ್ಯವಿವೆ.
ಕಲಾವೈಭವ ವಸ್ತುಪ್ರದರ್ಶನದ ಆರಂಭದಿಂದ ಕೊನೆಯ ಮಳಿಗೆವರೆಗೂ ಬಗೆ ಬಗೆಯ ಕಲೆಗಳ ಅನಾವರಣಕ್ಕೆ ಅವಕಾಶ ನೀಡಲಾಗಿದೆ. ಪ್ರವೇಶ ದ್ವಾರದಲ್ಲೇ ಕುಂಬಾರಿಕೆ ಕಲೆಯ ವೈಭವ ಸ್ವಾಗತಿಸುತ್ತದೆ. ಮಣ್ಣಿನ ಹೂಜಿಗಳು, ಅಲಂಕಾರಿಕ ವಸ್ತುಗಳು, ಮಣ್ಣಿನ ಪಾತ್ರೆಗಳು, ನೀರು ತುಂಬಿಸಿಡುವ ಫಿಲ್ಟರ್ ಗಳು ಕೂಡ ಇವೆ. ಬೇಸಿಗೆ ಬಿಸಿಲು ತಣಿಸಲು ಮಣ್ಣಿನ ಪಾತ್ರೆಗಳ ಮೊರೆ ಹೋಗುತ್ತಿರುವ ಈ ಸಂದರ್ಭದಲ್ಲಿ ಮಣ್ಣಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜತೆಗೆ, ಮೈಸೂರಿನ ಕುಂಭಕಲಾ ಕುಟೀರದ ಮಳಿಗೆಯೂ ವಿಶೇಷ ಆಕರ್ಷಣೆ ಪಡೆದುಕೊಂಡಿದೆ.
ಮಣ್ಣಿನ ದೀಪಗಳು, ಸಣ್ಣ ಲ್ಯಾಂಟನ್ಗಳು, ದೇವರ ವಿಗ್ರಹಗಳು, ಅಲಂಕಾರಿಕ ವಸ್ತುಗಳು, ಮಣ್ಣಿನಿಂದ ತಯಾರಿಸಿದ ಬುದ್ಧ, ಗಣಪತಿ, ಆನೆ, ಕುದುರೆ, ಲೋಟ, ಹೂಜಿಗಳ ಅಪಾರ ಹಾಗೂ ಅಪೂರ್ವ ಸಂಗ್ರಹ ಈ ಮಳಿಗೆಯಲ್ಲಿದೆ. ಇವುಗಳನ್ನು ತಯಾರಿಸುವ ಕಲಾಕಾರರ ಪ್ರೌಢಿಮೆಗೂ ಈ ಮೇಳ ಸಾಕ್ಷಿಯಾಗಿದೆ.
ತಿ.ನರಸೀಪುರದ ಬಸವರಾಜು ಅವರ ರವಳೇಶ್ವರ ಬಿದಿರು ವರ್ಕ್ಸ್ ಮಳಿಗೆ ಸಂದರ್ಶಿಸಿದರೆ ಬಿದಿರು ಹಾಗೂ ಬೆತ್ತದಿಂದ ಯಾವೆಲ್ಲ ಬಗೆಯ ವಸ್ತುಗಳನ್ನು ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಬಹುದು. ಬಿದಿರು ಹಾಗೂ ಬೆತ್ತದ ಮೌಲ್ಯವರ್ಧನೆ ಕಾಣಬಹುದು. ಹೂದಾನಿ, ಬೀಸಣಿಕೆ, ಲ್ಯಾಂಪ್ ಹೋಲ್ಡರ್ ಗಳು, ಮೊಬೈಲ್ ಸ್ಟ್ಯಾಂಡರ್ ಗಳು, ಹೂವಿನ ಬುಟ್ಟಿ, ಬಿದಿರಿನಿಂದ ಮಾಡಿರುವ ಆಭರಣಗಳ ಸಂಗ್ರಹವೇ ಇದೆ. ಮೇಳದಲ್ಲಿ ಸುಮಾರು 70 ಮಳಿಗೆಗಳಿದ್ದು, ಕೈತೋಟಗಳಿಗೆ ಬೇಕಾದ ಪರಿಕರಗಳು, ತಿಂಡಿ, ತಿನಿಸು, ಸೇರಿದಂತೆ ವಿವಿದ ಖಾದ್ಯಗಳ ಮಳಿಗೆಗಳು, ವಿವಿಧ ಆಭರಣಗಳ ಮಳಿಗೆಗಳು, ಚರ್ಮದ ಚಪ್ಪಲಿಗಳ ಮಾರಾಟದ ಮಳಿಗೆಗಳು, ಆಕರ್ಷಕ ಪೀಠೋಪಕರಣಗಳ ಮಳಿಗೆಗಳು, ಚನ್ನಪಟ್ಟಣದ ಗೊಂಬೆಗಳು, ಪೂಜಾ ಸಾಮಗ್ರಿಗಳು, ಸೆಣಬಿನ ಬ್ಯಾಗ್ ಗಳು, ಮರದ ಕೆತ್ತನೆಗಳ ಮಾರಾಟ ಮಳಿಗೆಗಳೂ ಮನ ಸೆಳೆಯುತ್ತವೆ.