News Kannada
Wednesday, December 07 2022

ಮೈಸೂರು

ಪರಿಸರ ಸ್ನೇಹಿ ಗಣಪನ ಸೃಷ್ಠಿಕರ್ತ ಮೋಹನ್

Photo Credit :

ಪರಿಸರ ಸ್ನೇಹಿ ಗಣಪನ ಸೃಷ್ಠಿಕರ್ತ ಮೋಹನ್

ಮೈಸೂರು: ಗೌರಿಗಣೇಶ ಹಬ್ಬ ಬರುತ್ತಿದ್ದಂತೆಯೇ ಗಣಪತಿ ಮೂರ್ತಿ ತಯಾರಿಸುವ ಕಲಾವಿದರಿಗೆ ಒಂದಷ್ಟು ಬೇಡಿಕೆ ಕಂಡು ಬರುತ್ತದೆ. ಅದರಲ್ಲಿಯೂ ಇತ್ತೀಚೆಗೆ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಿರುವ ಜನ ಮಣ್ಣಿನ ಗಣಪನನ್ನು ಪೂಜೆಗೆ ಬಳಸುತ್ತಿದ್ದಾರೆ. ಹೀಗಾಗಿ ಪರಿಸರ ಸ್ನೇಹಿ ಗಣಪತಿಯ ಮೂರ್ತಿಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ.

ಬಹಳಷ್ಟು ಕಲಾವಿದರು ಮಣ್ಣಿನ ಗಣಪನ ತಯಾರಿಕೆಯತ್ತ ಆಸಕ್ತಿ ವಹಿಸಿದ್ದು ಇಂತಹವರ ಪೈಕಿ ಪಿರಿಯಾಪಟ್ಟಣದ ಕಲಾವಿದ ಮೋಹನ್ ಕೂಡ ಒಬ್ಬರಾಗಿದ್ದಾರೆ. ಇವರು ಕಳೆದ ಎರಡು ದಶಕಗಳಿಂದ ಗಣಪತಿ ಮೂರ್ತಿಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಾ ಅದರಲ್ಲಿಯೇ ಬದುಕು ಕಂಡುಕೊಂಡಿದ್ದಾರೆ.

ಸಾಮಾನ್ಯವಾಗಿ ಗಣೇಶನ ಮೂರ್ತಿ ತಯಾರಿಸುವ ಕಲಾವಿದರಿಗೆ ಹಬ್ಬದ ಸಮಯದಲ್ಲಿ ಮಾತ್ರ ಬೇಡಿಕೆ ಉಳಿದ ದಿನಗಳಲ್ಲಿ ಕೇಳೋರು ಇರೋದಿಲ್ಲ. ಆದ್ದರಿಂದ ಹಬ್ಬಕ್ಕೆ ಕೆಲವು ತಿಂಗಳು ಇರುವಾಗ ಗಣಪತಿ ಮೂರ್ತಿ ತಯಾರಿಸುವ ಕೆಲಸ ಆರಂಭಿಸುತ್ತಾರೆ. ಮಾಡಿದ ಮೂರ್ತಿಗಳು ಮಾರಾಟವಾದರೆ ಮಾಡಿದ ಕೆಲಸ ಸಾರ್ಥಕವಾಗುತ್ತದೆ.

ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಕಲಾವಿದ ಮೋಹನ್ ಅವರು ತಮ್ಮ ಮನೆಯಲ್ಲಿಯೇ ಸಣ್ಣಪುಟ್ಟ ವಿಗ್ರಹಗಳನ್ನು ತಯಾರಿಸಿ ಇತರರಿಂದ ಪ್ರಶಂಸೆಗೆ ಪಾತ್ರರಾಗುತ್ತಿದ್ದರು. ತದ ನಂತರ ಇತರೆ ಕೆಲಸಗಳ ಜೊತೆಗೆ ವಿಗ್ರಹ ನಿರ್ಮಾಣದ ಕಲೆಗೆ ಹೆಚ್ಚು ಒತ್ತು ಕೊಟ್ಟು ಸುಂದರ ಮೂರ್ತಿಗಳನ್ನು ತಯಾರಿಸುವ ಮೂಲಕ ಎಲ್ಲರ ಗಮನಸೆಳೆಯಲಾರಂಭಿಸಿದರು. ಇವರ ಕಲೆಗೆ ಪೋಷಕರ ಸಹಕಾರ ಇದ್ದುದರಿಂದ ಇದೇ ವೃತ್ತಿಯಲ್ಲಿ ಮುಂದುವರೆಯಲು ಸಾಧ್ಯವಾಯಿತು.

ಪ್ರಾರಂಭದಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿ ವಿಗ್ರಹ ತಯಾರಿಸುತ್ತಿದ್ದ ಮೋಹನ್ ಇತ್ತೀಚೆಗೆ ಪರಿಸರ ಪ್ರೇಮಿ ಗಣೇಶನ ತಯಾರಿಕೆಯಲ್ಲಿ ತೊಡಗಿದ್ದಾರೆ. ಪ್ರಕೃತಿ ದತ್ತವಾದ ಕೆರೆ ಮಣ್ಣು ಮತ್ತು ಮರದ ಅಂಟನ್ನು ಬಳಸಿ ವಿಗ್ರಹ ತಯಾರಿಸುತ್ತಿದ್ದಾರೆ. ಮಣ್ಣು ಕರಗಿದ ನಂತರ ಸಸಿಗಳಾಗಿ ಬೆಳೆಯುವ ಕೆಲವೊಂದು ಗಿಡಗಳ ಬೀಜವನ್ನು ಹಾಕಿ ವಿಗ್ರಹ ತಯಾರಿಸುತ್ತಾರೆ. ವಿಗ್ರಹವು ನೀರಿನಲ್ಲಿ ಮುಳುಗಿ ಕರಗಿದ ನಂತರ ಅದರಲ್ಲಿನ ಬೀಜಗಳು ಸಸಿಗಳಾಗಿ ಬೆಳೆದು ಪರಿಸರಕ್ಕೆ ಉಪಯೋಗವಾಗಲಿದೆ ಎನ್ನುವುದು ಅವರ ಆಲೋಚನೆಯಾಗಿದೆ.

ಇವರು ತಮ್ಮ ಪರಿಸರ ಪ್ರೇಮದಿಂದಾಗಿ ರಾಸಾಯನಿಕ ಅಂಶದಿಂದ ತಯಾರಿಸಿದ ಬಣ್ಣವನ್ನು ಬಳಸದೆ ಬರೀ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡಿದರಾದರೂ ಜನ ಬಣ್ಣ ಆಕರ್ಷಣೆಗೆ ಒತ್ತು ಕೊಡುವುದರಿಂದ ಅವರು ತಯಾರಿಸಿದ ವಿಗ್ರಹಗಳು ಖರ್ಚಾಗದೆ ಉಳಿದು ಹೋದವು.

ಇದರಿಂದ ಕೈ ಸುಟ್ಟುಕೊಂಡ ಮೋಹನ್ ಅವರು ಇದೀಗ ಎಚ್ಚೆತ್ತುಕೊಂಡು ನೀರಿನಿಂದ ಕರಗಿ ಹೋಗುವ ಬಣ್ಣಗಳನ್ನು ಬಳಸಿ ವಿಗ್ರಹಕ್ಕೆ ಮೆರಗು ನೀಡುತ್ತಿದ್ದಾರೆ. ಇದರಿಂದ ಆಕರ್ಷಿತರಾದ ಸಾರ್ವಜನಿಕರು ವಿಗ್ರಹಗಳನ್ನು ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗಾಗಿ ಅವರು ಖುಷಿಯಾಗಿದ್ದಾರೆ.

ಇವರ ಕೈಚಳಕದಲ್ಲಿ ತ್ರಿಮುಖ ಗಣೇಶ, ಆಂಜನೇಯ ಸಾರಥಿ, ಗರುಡ ಸಾರಥಿ, ಸಿಂಹವಾಹನ, ನಂದಿ ವಾಹನ, ಆನೆ ವಾಹನ, ಬಸವ ಗಣೇಶ, ನವೀಲು ಗಣೇಶ, ಏಳುತಲೆ ಸರ್ಪವಿರುವ ವಿಭಿನ್ನ ರೀತಿಯ ಗಣೇಶನ ವಿಗ್ರಹಗಳು ನಿರ್ಮಾಣವಾಗಿದ್ದು ಗಮನಸೆಳೆಯುತ್ತಿವೆ.

See also  ಅನಾಹುತ ಸೃಷ್ಟಿಸುತ್ತಿರುವ ರಸ್ತೆ ಡುಬ್ಬ

ವಿಗ್ರಹಗಳು ಒಂದು ಅಡಿಯಿಂದ ಪ್ರಾರಂಭವಾಗಿ ಸುಮಾರು 5 ಅಡಿಗಳವರೆಗೂ ನಿರ್ಮಿಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮೋಹನ್‌ರವರಂತೆ ಎಲ್ಲರೂ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ನಿರ್ಮಿಸಿದರೆ ಗೌರಿ-ಗಣೇಶ ಹಬ್ಬದಲ್ಲಿ ಗಣಪತಿ ವಿಸರ್ಜನೆಯಿಂದ ಪರಿಸರದಲ್ಲಿ ಆಗುವ ಅನೈರ್ಮಲ್ಯವನ್ನು ತಡೆಯಲು ಸಾಧ್ಯವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು