News Kannada
Wednesday, December 07 2022

ಮೈಸೂರು

ವಿದ್ಯುದ್ದೀಪದ ಬೆಳಕಿನಲ್ಲಿ ಮಿರಮಿರ ಮಿಂಚುವ ಮೈಸೂರು

Photo Credit :

ವಿದ್ಯುದ್ದೀಪದ ಬೆಳಕಿನಲ್ಲಿ ಮಿರಮಿರ ಮಿಂಚುವ ಮೈಸೂರು

ಎಲ್ಲೆಂದರಲ್ಲಿ ಮಿನುಗುತ್ತಾ ಕತ್ತಲನ್ನೋಡಿಸಿ ಬೆಳಕು ಚೆಲ್ಲುತ್ತಿರುವ ಸಾಂಸ್ಕøತಿಕ ನಗರಿಯನ್ನು ನೋಡಿದ ಮಂದಿ ಇದು ಮೈಸೂರೋ ಇಲ್ಲ ಧರೆಗಿಳಿದ ದೇವೇಂದ್ರನ ಅಮರಾವತಿಯೋ ಎಂದು ಅಚ್ಚರಿಯ ನೋಟ ಬೀರುತ್ತಿದ್ದಾರೆ.

ಇದೀಗ ವಿದ್ಯುತ್ ದೀಪದ ಬೆಳಕಿನಲ್ಲಿ ಮಿಂದೇಳುತ್ತಿರುವ ನಗರಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗುತ್ತಿದ್ದು, ಎಲ್ಲರ ಮೈಮನವನ್ನು ಪುಳಕಗೊಳಿಸುತ್ತಿದೆ.

ದಸರಾದ ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ಮಳೆ, ಪ್ರವಾಹ ಎಲ್ಲವನ್ನೂ ಮರೆತು ನಗರದ ಜನ ದಸರಾ ಸಡಗರದಲ್ಲಿ ಮೀಯುತ್ತಿದ್ದು, ಎಲ್ಲರೂ ಎಲ್ಲವನ್ನೂ ಮರೆತು ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ರೈತರು, ಮಹಿಳೆಯರು, ಯುವಕರು, ಯುವತಿಯರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಎಲ್ಲರೂ ತಮ್ಮ ನಿತ್ಯದ ಜಂಜಡ ಮರೆತು ದಸರಾದಲ್ಲಿ ಪಾಲ್ಗೊಳ್ಳುತ್ತಾ ಸಂಭ್ರಮಿಸುತ್ತಿದ್ದರೆ, ಬೋಜನ ಪ್ರಿಯರು ಆಹಾರ ಮೇಳಗಳಲ್ಲಿ, ಕಲಾಪ್ರೇಮಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಜಾ ಮಾಡುತ್ತಿದ್ದಾರೆ. ಇನ್ನು ಕೆಲವರು ನಗರದಲ್ಲಿ ಎಲ್ಲೆಂದರಲ್ಲಿ ಹೆಜ್ಜೆ ಹಾಕುತ್ತಾ ಸೆಲ್ಪಿ ತೆಗೆದುಕೊಳ್ಳುತ್ತಾ ಸಂತಸ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಮಾಡುತ್ತಿದೆ. ಇಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳು ಮನಸೆಳೆಯುತ್ತಿವೆ. ಹಿಂದಿನ ರಾಜ ವೈಭವ ಮತ್ತೆ ಮರುಕಳಿಸಿದಂತೆ ಭಾಸವಾಗುತ್ತದೆ. ಜತೆಗೆ ನಿತ್ಯದ ಜಂಜಡವನ್ನು ಮರೆಯಿಸಿ ಒಂದು ಕ್ಷಣ ಮೈಮನ ಪುಳಕಿತವಾಗುವಂತೆ ಮಾಡುತ್ತಿದೆ.

ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರುತ್ತಿರುವ ಜನ ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಂಡು ಹೋಗುತ್ತಿದ್ದಾರೆ. ನಗರದ ಅಲ್ಲಲ್ಲಿ ವೃತ್ತಗಳು, ರಸ್ತೆಗಳು, ಮರಗಳು, ಕಟ್ಟಡಗಳು ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಅವು ಮಿನುಗುವಾಗ ಕಾಣುವ ದೃಶ್ಯ ಅದ್ಭುತ. ಬಹುತೇಕ ವೃತ್ತಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದ್ದು ಇದೆಲ್ಲವೂ ಮೈಸೂರು ದಸರಾ ಏಷ್ಟೊಂದು ಸುಂದರಾ ಎಂಬ ಪದಕ್ಕೆ ಅರ್ಥ ನೀಡುತ್ತಿದೆ. ಒಟ್ಟಾರೆ ಸ್ವರ್ಗದ ಹಾದಿಯಾಗಿಸಿ ಮೈಸೂರಿಗೆ ಮೈಸೂರೇ ಸಾಟಿ ಎನ್ನುವುದನ್ನು ಸಾರಿ ಹೇಳುತ್ತಿದೆ.

ಹಿಂದಿನಿಂದಲೂ ಅಷ್ಟೆ. ಮೈಸೂರು ದಸರಾ ಎಂದಾಕ್ಷಣ ಏನೋ ಒಂಥರಾ ಆನಂದ. ಮೈಮನವೆಲ್ಲಾ ರೋಮಾಂಚನ. ಕಣ್ಮುಂದೆ ಚೆಂದದ ಮೈಸೂರು, ಅಂದದ ಅರಮನೆ, ಸುಂದರ ಚಿನ್ನದ ಅಂಬಾರಿ, ಮನಸೆಳೆವ ರತ್ನ ಸಿಂಹಾಸನ, ಸಿಂಹಾಸನಾಧೀಶರಾಗಿ ಮೆರೆದ ಮಹಾರಾಜರ ವೈಭವ-ವೈಭೋಗಗಳೆಲ್ಲವೂ ನೆನಪುಗಳ ಮೆರವಣಿಗೆಯಾಗಿ ತೇಲಿ ಬರುತ್ತದೆ. ಇದರ ಜೊತೆಗೆ ಮೈಸೂರು ದಸರೆಯ ಜಂಬೂ ಸವಾರಿ ಮತ್ತೆ ಮತ್ತೆ ಕಣ್ಣಿಗೆ ಕಟ್ಟಿದಂತೆ ನೆನಪಿನ ಪರದೆಯಲ್ಲಿ ಹಾದು ಹೋಗುತ್ತದೆ. ಇದೇ ನೋಡಿ ಮೈಸೂರು ದಸರಾದ ವೈಶಿಷ್ಟ್ಯತೆ.

ಮೈಸೂರು ದಸರಾ ಅಂದರೆ ಬರೀ ಮಿನುಗುವ ವಿದ್ಯುದ್ದೀಪವಲ್ಲ ಅದರಾಚೆಗೆ ಇತಿಹಾಸ, ಸಂಪ್ರದಾಯ, ಪಾರಂಪರಿಕತೆ, ರಾಜವೈಭವ ಎಲ್ಲವನ್ನೂ ಸಾರಿ ಹೇಳುವ ಸಾಂಸ್ಕøತಿಕ ಹಬ್ಬವೂ ಹೌದು.

ವಿಜಯದಶಮಿಯ ದಸರಾ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮುಂದುವರಿಸಿಕೊಂಡು ಬಂದವರು ಯದುವಂಶದ ಮೈಸೂರು ಒಡೆಯರು. ಇವರಲ್ಲಿನ 9ನೇ ಆಳ್ವಿಕೆಯ ರಾಜ ಒಡೆಯರು (1578-1617) ಅಂದು ತಮ್ಮ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ನವರಾತ್ರಿ ಉತ್ಸವದ ವಿಜಯದಶಮಿಯ ದಸರಾ ಮಹೋತ್ಸವವನ್ನು ಮೊದಲಿಗೆ ಆರಂಭಿಸಿದರು.

See also  ಹನಿಟ್ರ್ಯಾಪ್ ಸಂತ್ರಸ್ಥರು ಧೈರ್ಯದಿಂದ ದೂರು ನೀಡಿ: ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ  

ಥೇಟ್ ವಿಜಯನಗರ ಅರಸರ ಸಂಪ್ರದಾಯದಂತೆಯೇ ದಸರಾಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಶಾಸ್ತ್ರ ಹಾಗೂ ವಿಧಿ-ವಿಧಾನಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಅಳವಡಿಸಿಕೊಂಡರು. ಈ ಪ್ರಕಾರ ಅಶ್ವಯುಜ ಶುದ್ಧ ಪ್ರಥಮೆಯಂದು ನವರಾತ್ರಿ ಉತ್ಸವ ಶುರುವಾಗಿ ಮಹಾನವಮಿಯ ಕಡೇ ದಿನದವರೆವಿಗೂ ಪ್ರತಿನಿತ್ಯ ಪೂಜೆ-ಪುನಸ್ಕಾರ, ಪೂರ್ವಾಹ್ನ ಮತ್ತು ಮಧ್ಯಾಹ್ನ ಸಿಂಹಾಸನಾರೋಹಣ, ಒಡ್ಡೋಲಗ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಬೇಕೆಂದು ಪಕ್ಕಾ ವಿಧೇಯಕವನ್ನೇ ಮಾಡಿ ದಸರಾ ಹಬ್ಬವನ್ನು ಆಚರಣೆಗೆ ತಂದರು. ಅವತ್ತಿನ ದಸರಾ ಮತ್ತು ಇವತ್ತಿನ ದಸರಾಕ್ಕೂ ಹೋಲಿಕೆ ಮಾಡಿದರೆ ಒಂದಷ್ಟು ಬದಲಾವಣೆಗಳಿದ್ದರೂ ಶಾಸ್ತ್ರ ಸಂಪ್ರದಾಯವನ್ನು ಹಾಗೆಯೇ ಉಳಿಸಿಕೊಂಡು ಹೋಗಲಾಗುತ್ತಿದೆ. ಅದೇ ಮೈಸೂರು ದಸರಾದ ವೈಶಿಷ್ಟ್ಯತೆ ಎಂದರ ಅತಿಶಯೋಕ್ತಿಯಾಗಲಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು