ಮೈಸೂರು: ಎರಡು ಸಾವಿರ ಮತ್ತು ಐನೂರು ರೂಪಾಯಿಗಳ ಖೋಟಾ ನೋಟುಗಳನ್ನು ಚಲಾಯಿಸುತ್ತಿದ್ದ ಮೂವರನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು40,500 ರೂ.ಗಳ ಖೋಟಾ ನೋಟನ್ನು ವಶಕ್ಕೆ ಪಡೆದಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕುರುಬಗೇರಿಯ ನಿವಾಸಿ ಗುರುಸ್ವಾಮಿ(33), ರವಿಶಂಕರ್(23) ಮತ್ತು ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದ ನಿವಾಸಿ ಮಹೇಶ್(23) ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಎರಡು ಸಾವಿರ ಮತ್ತು ಐನೂರು ರೂಪಾಯಿಗಳ ಖೋಟಾ ನೋಟುಗಳನ್ನಿಟ್ಟುಕೊಂಡು, ಮಂಡಿಮೊಹಲ್ಲಾದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಎಪಿಎಂಸಿ ಮಳಿಗೆ ಸಂಖ್ಯೆ-9ರ ಮುಂಭಾಗದ ಎಸ್.ಬಿ ವೈನ್ಸ್ ನಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದಾರೆ. ಈ ಬಗ್ಗೆ ಸಂಶಯ ಬಂದಿದ್ದರಿಂದ ಪೊಲಿಸರಿಗೆ ಮಾಹಿತಿ ಹೋಗಿದೆ.
ಹೀಗಾಗಿ ಮೈಸೂರು ನಗರದ ಡಿ.ಸಿ.ಪಿ. ಮುತ್ತುರಾಜು. ಅವರ ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಎಸಿಪಿ ಗೋಪಾಲ್ ನೇತೃತ್ವದಲ್ಲಿ ಮಂಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಅರುಣ್ ಎಲ್ ಹಾಗೂ ಸಿಬ್ಬಂದಿ ಚಂದ್ರಶೇಖರ, ಹರೀಶ್, ರವಿಗೌಡ ಅವರು ದಿಢೀರ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಈ ವೇಳೆ ಆರೋಪಿಗಳ ಬಳಿ 2000 ಮುಖಬೆಲೆಯ 16 ಹಾಗೂ 500 ಮುಖಬೆಲೆಯ 17 ಖೋಟಾ ನೋಟುಗಳನ್ನು (ಒಟ್ಟು ರೂ.40,500/-ಗಳ ಖೋಟಾನೋಟುಗಳು) ದೊರೆತಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಮಡಿಕೇರಿಯಲ್ಲಿ ಖೋಟಾ ನೋಟು ಚಲಾಯಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಮೈಸೂರಿನಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿರುವ ದಂಧೆ ಪತ್ತೆಯಾಗಿದೆ. ಇಷ್ಟಕ್ಕೂ ಇವರಿಗೆ ಖೋಟಾ ನೋಟುಗಳನ್ನು ಸರಬರಾಜು ಮಾಡುತ್ತಿರುವವರು ಯಾರು ಎಂಬುದು ಮೊದಲಿಗೆ ಪತ್ತೆ ಹಚ್ಚಬೇಕಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವ ಶಂಕೆಯಿದ್ದು ಪೊಲೀಸರ ತನಿಖೆಯಿಂದಷ್ಟೆ ಮಾಹಿತಿ ಹೊರಬರಬೇಕಿದೆ.