ಮೈಸೂರು: ಜಾತಿ, ದೇಶಗಳ ಗಡಿ ಮೀರಿ ಬೆಳೆದ ಪ್ರೀತಿ ಹಸೆಮಣೆ ಏರುವುದರೊಂದಿಗೆ ಮೈಸೂರಿನ ಯುವತಿ ಮತ್ತು ನೆದರ್‌ಲ್ಯಾಂಡ್‌ನ ಯುವಕ ಒಂದಾಗಿದ್ದಾರೆ. ಇವರ ದಾಂಪತ್ಯ ಜೀವನಕ್ಕೆ ಹೆತ್ತವರು ಸಂಪ್ರದಾಯದಂತೆ ಮದುವೆ ನೆರವೇರಿಸಿ ಶುಭ ಹಾರೈಸಿದ್ದಾರೆ.
ವಿದೇಶಿ ಯುವಕ, ಯುವತಿಯರನ್ನು ಮದುವೆಯಾಗುವುದು ಹೊಸತೇನಲ್ಲ. ಆದರೂ ಮೈಸೂರಿನಲ್ಲಿ ನಡೆದ ವಿವಾಹ ವಿಶಿಷ್ಟವಾಗಿ ಗಮನಸೆಳೆದಿದೆ. ಮೈಸೂರಿನ ವಕೀಲರಾದ ಸುಮನಾ ಮತ್ತು ರಾಮ ರವೀಂದ್ರ ಅವರು ತಮ್ಮ ಪುತ್ರಿ ಅನುವನ್ನು ನೆದರ್‌ಲ್ಯಾಂಡ್ ನ ಯುವಕ ರೆನೆ ವ್ಯಾನ್ ಬರ್ಗೆಟ್‌ಗೆ ಧಾರೆ ಎರೆದುಕೊಟ್ಟಿದ್ದಾರೆ.
ಭತ್ತ ಕುಟ್ಟುವುದು, ಮೆಹೆಂದಿ ಶಾಸ್ತç, ಹೋಳಿ, ಅರಿಶಿನ ಹಚ್ಚುವ ಶಾಸ್ತç, ಗೌರಿ ಪೂಜೆ ಹೀಗೆ ಹಲವು ಸಂಪ್ರದಾಯದೊಂದಿಗೆ ಮದುವೆ ವಿಭಿನ್ನ ಮತ್ತು ವಿಶಿಷ್ಟವಾಗಿ ನಡೆದಿದ್ದು, ಇದಕ್ಕೆ ಪೋಲ್ಯಾಂಡ್, ಅಮೆರಿಕಾ, ಸ್ಪೇನ್, ಜರ್ಮನಿ, ನೆದರ್‌ಲ್ಯಾಂಡ್ ಮುಂತಾದ ದೇಶಗಳಿಂದ ಬಂದಿದ್ದ ಸುಮಾರು 40 ಮಂದಿ ವಿದೇಶಿ ಅತಿಥಿಗಳು ಸಾಕ್ಷಿಯಾದರು.
ಅನು ಎಲ್‌ಎಲ್‌ಎಂ(ಲ್ಯಾಟಿನ್ ಲೆಗಮ್ ಮ್ಯಾಜಿಸ್ಟರ್) ವ್ಯಾಸಂಗಕ್ಕೆ ನೆದರ್‌ಲ್ಯಾಂಡ್‌ಗೆ ತೆರಳಿದ್ದ ವೇಳೆ ಅಲ್ಲಿ ರೆನೆಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಬಳಿಕ ಈ ವಿಚಾರವನ್ನು ಪೋಷಕರಿಗೆ ತಿಳಿಸಿದಾಗ ವಿವಾಹಕ್ಕೆ ಸಮ್ಮತಿ ದೊರೆತಿತ್ತು. ಅದರಂತೆ ಪೋಷಕರು ಇಲ್ಲಿನ ಶಾಸ್ತ ಸಂಪ್ರದಾಯದಂತೆ ಮದುವೆಗೆ ಒಪ್ಪಿಗೆ ಸೂಚಿಸಿದ್ದು, ಪೋಷಕರು ಹಾಗೂ ಬಂಧುಬಳಗದ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಪ್ರೇಮಿಗಳು ಕಾಲಿರಿಸಿದ್ದಾರೆ.
ಇನ್ನೊಂದು ವಿಷಯವೇನೆಂದರೆ, ಅನು ತನ್ನ ಪ್ರಿಯಕರ ರೆನೆಗೆ ಕನ್ನಡ ಕಲಿಸುವ ಉತ್ಸಾಹದಲ್ಲಿದ್ದು ಕೆಲವು ಪದಗಳನ್ನು ಆತ ಕಲಿತಿದ್ದಾನಂತೆ ಅದು ಏನೇ ಇರಲಿ ಮೈಸೂರಿನ ಹುಡುಗಿ, ನೇದರ್ ಲ್ಯಾಂಡ್‌ನ ಯುವಕನ ಮದುವೆ ಸುಗಮವಾಗಿ ನಡೆದಿದ್ದು, ಅವರ ದಾಂಪತ್ಯ ಸುಖಮಯವಾಗಿರಲಿ.