ಮೈಸೂರು: ಮೈಸೂರಿನ ಕಲಾನಿಕೇತನ ಕಲಾ ಶಾಲೆಯಲ್ಲಿ ಆಯೋಜಿಸಿದ್ದ ಕಲಾತ್ಮಕ ಛಾಯಾಚಿತ್ರಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಪ್ರದರ್ಶನದಲ್ಲಿ ಕಂಡು ಬಂದ ಚಿತ್ರಗಳ ಪೈಕಿ ಒಂದೊಂದು ಒಂದೊಂದು ರೀತಿಯಲ್ಲಿ ಗಮನಸೆಳೆಯುತ್ತಿವೆ. ಹಾಗೆ ಸುಮ್ಮನೆ ಕಣ್ಣು ಹಾಯಿಸುತ್ತಾ ಬಂದದ್ದೇ ಆದರೆ ಗುಹೆಯೊಳಗಿನ ಜೀವ ಹೊಸ ಜೀವ ಹುಡುಕಲು ಹಾತೊರೆಯುವ ಮತ್ತು ಧೂಮ, ಮದ್ಯಗಳು ಕಾಲ್ಕೆರೆದು ಎಳೆಯುವ, ಹಗ್ಗದಿ ಬಿಗಿದು ಪ್ರೀತಿಯೂ ಕೈಗೆ ಸಿಗುವಂತೆ ಚೆಲ್ಲಾಟವಾಡುವ ಹೀಗೆ ಹತ್ತಾರು ಸನ್ನಿವೇಶವನ್ನು ನಮ್ಮ ಮುಂದೆ ಹೇಳಲೇ ಎಂಬಂತೆ ಭಾಸವಾಗುವ ಚಿತ್ರಗಳ ನೋಟ ಓರೆಗೆ ಹಚ್ಚುತ್ತದೆ. ಕಲಾವಿದರು ಕ್ಲಿಕ್ಕಿಸಿದ ಛಾಯಾಚಿತ್ರಗಳನ್ನು ನೋಡುತ್ತಾ ಹೋದಂತೆ ಹೊಸದೊಂದು ಲೋಕ ಅನಾವರಣಗೊಳ್ಳುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಛಾಯಾಚಿತ್ರಗಳ ಪ್ರದರ್ಶನದಲ್ಲಿ ಧಾರವಾಡದ ಅಶೋಕ್, ಬೆಂಗಳೂರಿನ ಪ್ರಮೋದ್ ಸ್ಟೀಫನ್, ದಕ್ಷಿಣ ಕನ್ನಡದ ನವೀನ್‍ಕುಮಾರ್ ಪುತ್ತೂರು, ಬಾಗಲಕೋಟೆಯ ಇಂದ್ರಕುಮಾರ್ ದತ್ತನ್, ಸಂತೋಷ್, ವೈಭವ್ ಮತ್ತು ಬಾದಾಮಿಯ ರವಿಕುಮಾರ್ ಸಮಾನ ಮನಸ್ಸಿನ ಕಲಾವಿದರು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದು ಸುಮಾರು 70 ಛಾಯಾಚಿತ್ರಗಳಲ್ಲಿ ಗ್ರಾಮೀಣ ಕಲೆ, ಟಿಬೆಟಿಯನ್ನರ ಸಂಸ್ಕೃತಿ, ಆಲೆಮನೆಯಲ್ಲಿ ಕಂಡ ಬಗೆ-ಬಗೆಯ ಬಣ್ಣದ ಬೆಳಕಿನ ವರ್ಣನೆ, ಹುಲಿಯಾಟ, ರಥೋತ್ಸವ, ಕೊಂಡ ಹಾಯುತ್ತಿರುವ ಮಹಿಳೆ ಹಾಗೂ ಛಾಟಿ ಏಟಿನ ರುಚಿ ತೋರಿಸುವ ಡೊಂಬರಾಟ ಸೇರಿದಂತೆ ವಿವಿಧ ದೃಷ್ಟಿಕೋನಗಳ ಚಿತ್ರಗಳೊಂದಿಗೆ ಗ್ರಾಮೀಣ ಕಲೆ, ಸಂಸ್ಕೃತಿಯ ಸೊಬಗನ್ನು ಸಾರುತ್ತಿವೆ.
ಈ ಕುರಿತಂತೆ ಮಾತನಾಡಿದ ಕಲಾವಿದ ನವೀನ್ ಪುತ್ತೂರು ಅವರು, ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ಛಾಯಾಚಿತ್ರಗಳನ್ನು ಪ್ರದರ್ಶಿಸಿ ಈಗಾಗಲೇ ಬಾಗಲಕೋಟೆಯಲ್ಲಿ ಪ್ರದರ್ಶನ ಮಾಡಿ, ಮೈಸೂರಿನಲ್ಲಿ 2ನೇ ಬಾರಿಗೆ ಆಗಿದೆ. ಧಾರವಾಡ, ಬೆಂಗಳೂರು, ಮಂಗಳೂರು, ನಂತರ ಮುಂಬೈನಲ್ಲಿ ಪ್ರದರ್ಶಿಸಿ ನಂತರ ಅಮರಿಕ ದೇಶದಲ್ಲೂ ಛಾಯಾಚಿತ್ರ ಪ್ರದರ್ಶಿಸುವ ಉದ್ದೇಶ ಹೊಂದಿರುವುದಾಗಿ ಹೇಳುತ್ತಾರೆ.
ಮೊದಲ ಬಾರಿಗೆ ಹಲವು ವಸ್ತು ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಛಾಯಾಚಿತ್ರಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದು ಇದಕ್ಕೆ ಪ್ರೇಕ್ಷಕರು ಹಾಗೂ ವಿದ್ಯಾರ್ಥಿಗಳಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ನ.17ರವರೆಗೆ ಛಾಯಾಚಿತ್ರ ಪ್ರದರ್ಶನವಿರಲಿದ್ದು, ಮಾರಾಟಕ್ಕೂ ಆದ್ಯತೆ ಇದೆ. ಆಸಕ್ತರು ಮೊ.ಸಂ.9008391674ನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.