ಮೈಸೂರು: ನಗರದ ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ ಬೆನ್ನಲ್ಲೆ ಲಿಂಗಾಬುಧಿ ಕೆರೆಯಲ್ಲಿ 15ಕ್ಕೂ ಹೆಚ್ಚು ನಾರ್ಥನ್ ಶಾವೆಲ್ಲರ್ ಪಕ್ಷಿಗಳು ಮೃತಪಟ್ಟಿದ್ದು ಪಕ್ಷಿಪ್ರಿಯರಲ್ಲಿ ಆತಂಕ ಮೂಡಿಸಿದೆ.
ಕೆಲ ದಿನಗಳ ಹಿಂದೆ ಕುಕ್ಕರಹಳ್ಳಿ ಕೆರೆಯಲ್ಲಿ ಮೂರು ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ್ದವು. ಈ ಘಟನೆ ಮಾಸುವ ಮುನ್ನವೇ ಮಧ್ಯ ಯೂರೋಪ್‍ನಿಂದ ಸಂತಾನೋತ್ಪತ್ತಿಗಾಗಿ ವಲಸೆ ಬಂದಿದ್ದ ನಾರ್ಥನ್ ಶಾವೆಲ್ಲರ್ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಜಸ್ತಾನದಲ್ಲಿ 4,300ಕ್ಕೂ ಹೆಚ್ಚು ನಾರ್ಥನ್ ಶಾವೆಲ್ಲರ್ ಪಕ್ಷಿಗಳು ಮೃತಪಟ್ಟ ಬೆನ್ನಲ್ಲೇ 15ಕ್ಕೂ ಹೆಚ್ಚು ಪಕ್ಷಿಗಳ ಕಳೆಬರ ಮೈಸೂರಿನ ಲಿಂಗಾಬುಧಿ ಕೆರೆಯ ದಡದಲ್ಲಿ ಪತ್ತೆಯಾಗಿವೆ. ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲದಿದ್ದರೂ, ವೈರಸ್‍ನಿಂದ ಪಕ್ಷಿಗಳು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೆರೆ ದಡದಲ್ಲಿ ಪಕ್ಷಿಗಳ ಕಳೆಬರ ಬಿದ್ದಿರುವುದು, ಬೈನಾಕ್ಯೂಲರ್‍ನಿಂದ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಕಂಡು ಬರುತ್ತದೆ. ಮತ್ತೊಂದೆಡೆ ಲಿಂಗಾಬುಧಿ ಪಾಳ್ಯದ ರಸ್ತೆಗೆ ಹೊಂದಿಕೊಂಡಂತಿರುವ ರಸ್ತೆಯ ಅಂಚಿನಲ್ಲಿರುವ ಕೆರೆ ದಡದಲ್ಲಿ(ಮಂಟಪದ ಬಳಿ) ಪಕ್ಷಿಗಳ ಆರು ಮೃತದೇಹ ತೇಲುತ್ತಿದ್ದವು.
ಬಾತುಕೋಳಿಯಂತೆ ಕಾಣುವ ನಾರ್ಥನ್ ಶಾವೆಲ್ಲರ್ ಪ್ರತಿವರ್ಷ ಸಂತಾನೋತ್ಪತ್ತಿಗಾಗಿ ಮಧ್ಯೆ ಯೂರೋಪ್‍ನಿಂದ ಭಾರತದ ವಿವಿಧ ರಾಜ್ಯಗಳಿಗೆ ವಲಸೆ ಬರುತ್ತದೆ. ಇಲ್ಲಿಯೇ ಸಂತಾನೋತ್ಪತ್ತಿ ನಡೆಸಿ ಬಳಿಕ, ಸ್ವದೇಶಕ್ಕೆ ಮರಳುತ್ತವೆ. ಹೀಗಿರುವಾಗ ವಲಸೆ ಬಂದ ಆರಂಭದಲ್ಲೇ ಪಕ್ಷಿಗಳು ಮೃತಪಟ್ಟಿರುವುದು ಪಕ್ಷಿಪ್ರಿಯರು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳಲ್ಲೂ ಆತಂಕ ತಂದಿದೆ.
ಪೆಲಿಕಾನ್ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಕೆರೆಯ ದ್ವೀಪ, ಗಿಡ-ಮರಗಳ ಮೇಲೆ ಬೀಡುಬಿಟ್ಟಿದ್ದು, ಆರೋಗ್ಯದಿಂದ ಇರುವ ಪಕ್ಷಿಗಳಿಗೂ ಸೋಂಕು ತಗುಲಬಹುದು ಎಂಬ ಆತಂಕ ಆವರಿಸಿದೆ. ಇದರಿಂದ ಅರಣ್ಯ ಇಲಾಖೆ ಇತರೇ ಪಕ್ಷಿಗಳ ಆರೋಗ್ಯ ಕಾಪಾಡುವಲ್ಲಿ ಕಾರ್ಯೋನ್ಮುಖವಾಗಿದೆ.
ಲಿಂಗಾಬುಧಿ ಕೆರೆ ಆಳವಾಗಿದ್ದು, ನೀರು ಹೆಚ್ಚಾಗಿರುವುದರಿಂದ ಕೆರೆಯ ವಿವಿಧೆಡೆ ಬಿದ್ದಿರುವ ಪಕ್ಷಿಗಳ ಕಳೆಬರ ಹೊರತೆಗೆಯಲು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ತೆಪ್ಪವನ್ನು ಬಳಸಿ, ಸಿಬ್ಬಂದಿಗಳಿಗೆ ಲೈಫ್ ಜಾಕೆಟ್ ಹಾಕಿಸಿ ಸಂಜೆ ಕೆರೆ ದಡದಲ್ಲಿ ಬಿದ್ದಿದ್ದ ಪಕ್ಷಿಗಳ ಕಳೆಬರ ಮೇಲೆತ್ತುವ ಕಾರ್ಯಾಚರಣೆ ನಡೆಸಲಾಯಿತು.
20ಕ್ಕೂ ಹೆಚ್ಚು ಪಕ್ಷಿಗಳು ಸಾವು: ಕೆಲ ಭಾಗಗಳಲ್ಲಿ ಪಕ್ಷಿಗಳ ಕಳೆಬರ ಅಸ್ತಿಪಂಜರದ ಸ್ಥಿತಿ ತಲುಪಿದ್ದು, ಸತ್ತ ಪಕ್ಷಿಗಳ ಮಾಂಸವನ್ನು ಇತರೇ ಪಕ್ಷಿಗಳು ಅಥವಾ ಜಲಚರಗಳು ತಿಂದಿರುವ ಸಾಧ್ಯತೆಗಳಿವೆ. ಇದರಿಂದ ಮೇಲ್ನೋಟಕ್ಕೆ 20ಕ್ಕೂ ಹೆಚ್ಚು ಪಕ್ಷಿಗಳು ಸಾವಿಗೀಡಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರ ಸಲಹೆ ಪಡೆಯಲಾಗುತ್ತಿದೆ.
ಪಕ್ಷಿಗಳ ಸಾವಿನ ಸುದ್ದಿ ತಿಳಿದು ಪಾಂಡವಪುರದಲ್ಲಿ ಆನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿದ್ದ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್‍ಕುಮಾರ್ ಶನಿವಾರ ಬೆಳಗ್ಗೆ ಲಿಂಗಾಬುಧಿಕೆರೆ ಆವರಣಕ್ಕೆ ಧಾವಿಸಿದರು. ಬೈನಾಕ್ಯೂಲರ್‍ನಿಂದ ಕೆರೆಯ ಮತ್ತೊಂದು ದಡದ ಸುತ್ತಲೂ ಸೂಕ್ಷ್ಮವಾಗಿ ಪರಿಶೀಲಿಸಿ, ತೆಪ್ಪ ತಂದು ಕೆರೆ ಸುತ್ತಲೂ ಸತ್ತು ಬಿದ್ದಿರುವ ಪಕ್ಷಿಗಳ ಕಳೆಬರವನ್ನು ಒಂದೂ ಬಿಡದಂತೆ ಮೇಲೆತ್ತಬೇಕು ಎಂದು ಸೂಚಿಸಿದರು.
ಈಗಾಗಲೇ ರಾಜಸ್ತಾನದಲ್ಲಿ 4,300ಕ್ಕೂ ಹೆಚ್ಚು ನಾರ್ಥನ್ ಶಾವೆಲ್ಲರ್ ಪಕ್ಷಿಗಳು ಮೃತಪಟ್ಟಿವೆ. ಸಾವಿನ ಬಗ್ಗೆ ನಿಖರ ಮಾಹಿತಿಯನ್ನು ಪಡೆಯಲು ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿದೆವು. ಅಲ್ಲಿಯೂ ಯಾವುದೇ ವೈರಸ್‍ನಿಂದ ಪಕ್ಷಿಗಳು ಸತ್ತಿಲ್ಲ ಎಂಬುದು ಪ್ರಾಥಮಿಕ ವರದಿಯಿಂದ ತಿಳಿದಬಂದಿದ್ದು, 2ನೇ ಹಂತದ ವರದಿಗಾಗಿ ಕಾಯುತ್ತಿz್ದÉೀವೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಒಂದು ಕಳೆಬರ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಉಳಿದ ಎಲ್ಲಾ ಪಕ್ಷಿಗಳ ಮೃತದೇಹವನ್ನು ಮೈಸೂರಿನ ಪ್ರಯೋಗಾಲಯದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಲಿಂಗಾಬುಧಿ ಕೆರೆಯಲ್ಲಿ ಗಸ್ತು ಹೆಚ್ಚಿಸಿ, ಪಕ್ಷಿಗಳ ಚಲನವಲನ ಹಾಗೂ ಆರೋಗ್ಯದ ಬಗ್ಗೆ ಗಮನಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.
ಆರ್‍ಎಫ್‍ಓ ಗೋವಿಂದರಾಜು, ಡಿಆರ್‍ಎಫ್‍ಓ ಟಿ.ಈ.ವಿಜಯ್‍ಕುಮಾರ್, ಸಿಬ್ಬಂದಿ ಸಂಜಯ್ ಹೋಯ್ಸಳ, ನಾಗೇಶ್ ಅವರು ಜತೆಗಿದ್ದರು.