ಮೈಸೂರು: ಚಾಮುಂಡಿಬೆಟ್ಟದಲ್ಲಿರುವ ನಂದಿ ವಿಗ್ರಹಕ್ಕೆ ಫಲ, ಪತ್ರೆ, ಹಾಲು, ಮೊಸರು ಸೇರಿದಂತೆ 40 ಬಗೆಯ ದ್ರವ್ಯಗಳಿಂದ ಮಹಾಭಿಷೇಕ ನೆರವೇರಿಸಲಾಯಿತಲ್ಲದೆ, ಇದಕ್ಕೆ ನೂರಾರು ಮಂದಿ ಸಾಕ್ಷಿಯಾದರು.
ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಕಾರ್ತಿಕ ಮಾಸದ ಅಂಗವಾಗಿ ಭಾನುವಾರ ಮಹಾಭಿಷೇಕ ಜರುಗಿತು. ಬೆಳಿಗ್ಗೆ 9.30ರಿಂದಲೇ ನಂದಿ ವಿಗ್ರಹದ ಪೂಜಾ ಕೈಂಕರ್ಯಗಳು ಪ್ರಾರಂಭವಾದವು.
ಮಹಾಭಿಷೇಕದ ವೇಳೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಹೊಸಮಠದ ಚಿದಾನಂದ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಚಾಮುಂಡಿಬೆಟ್ಟದ ವ್ಯಾಘ್ರಮುಖ ರುದ್ರಪಾದ ಗುಹೆಯ ಜಮನಗಿರಿ ಸ್ವಾಮೀಜಿ ಉಪಸ್ಥಿತರಿದ್ದರು.
ಇದೇ ವೇಳೆ 500ಲೀ. ಹಾಲು, 200ಲೀ. ಮೊಸರು, 40 ಕೆ.ಜಿ. ತುಪ್ಪ, ಅರಿಶಿಣ ಕುಂಕುಮ, ಗಂಧ-ಚಂದನ, ವಿಭೂತಿ, ಬಾಳೆ ಹಣ್ಣು, ಕಲ್ಲುಸಕ್ಕರೆ, ಸೇಬಿನ ಹಣ್ಣು, ಹಸಿ, ಒಣದ್ರಾಕ್ಷಿ, ಜೇನುತುಪ್ಪ, ಕಡಲೆ ಎಣ್ಣೆ, ಇತ್ಯಾದಿ ಸೇರಿ ಒಟ್ಟು 40 ಬಗೆಯ ದ್ರವ್ಯ ಹಾಗೂ ಹಣ್ಣುಗಳಿಂದ ಅಭಿಷೇಕ ನೇರವೇರಿಸಲಾಯಿತು.
ಇಷ್ಟೇ ಅಲ್ಲದೆ ಈ ಮಹಾಭಿಷೇಕದಲ್ಲಿ ಧನಾಭಿಷೇಕ ಮಾಡಿರುವುದು ಕೂಡ ವಿಶೇಷವಾಗಿ ಗಮನಸೆಳೆಯಿತು. ಇದೇ ವೇಳೆ ಭಕ್ತಾದಿಗಳು ನೀಡಿರುವ ಚಿಲ್ಲರೆ ಹಣವನ್ನು ನಂದಿ ವಿಗ್ರಹಕ್ಕೆ ಸಮರ್ಪಿಸಲಾಯಿತು. ಈ ವೇಳೆ ಭಕ್ತರು ಸೇರಿದಂತೆ ಸಾರ್ವಜನಿಕರು ಅಭಿಷೇಕವನ್ನು ಕಣ್ತುಂಬಿಕೊಂಡರು. ವಿವಿಧ ವರ್ಣಗಳಿಂದ ಆಕರ್ಷಿಸುತ್ತಿದ್ದ ನಂದಿಗೆ ಭಕ್ತರು ಪೂಜೆಯನ್ನು ಸಮರ್ಪಿಸಿದರು.
ಪ್ರತಿವರ್ಷ 3ನೇ ಕಾರ್ತಿಕ ಮಾಸದ ಹಿಂದಿನ ಭಾನುವಾರದಂದು ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಬೆಟ್ಟದ ನಂದಿಗೆ ಮಹಾಭಿಷೇಕ ಆಯೋಜಿಸುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಭಾನುವಾರ 14ನೇ ವರ್ಷದ ಮಹಾಭಿಷೇಕವನ್ನು ಅದ್ಧೂರಿಯಾಗಿ ನೆರವೇರಿಸಿತು.
ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳಾದ ಎಸ್.ಪ್ರಕಾಶ್, ಎನ್.ಗೋವಿಂದ, ವಿ.ಎನ್. ಸುಂದರ್, ಟ್ರಸ್ಟಿ ಬ್ಯಾಂಕ್ ಶಿವಕುಮಾರ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.