ಹನಗೋಡು: ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿರುವ ಘಟನೆ ಹನಗೋಡು ಹೋಬಳಿಯ ಗುರುಪುರ ಗ್ರಾಮದಲ್ಲಿ ನಡೆದಿದ್ದು, ಇದರಿಂದ ಆಕ್ರೋಶಗೊಂಡ ರೈತರು ಅರಣ್ಯ ಇಲಾಖೆ ವಿರುದ್ಧ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಗುರುಪುರ ಗಾಮದ ದಿ.ಮರಿಶೆಟ್ಟರ ಪುತ್ರ ರಾಘವೇಂದ್ರ (36) ಎಂಬುವರೇ ಕಾಡಾನೆ ದಾಳಿಗೊಳಗಾದವರಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂದಿನಂತೆ ರಾಘವೇಂದ್ರ ತಮ್ಮ ಜಮೀನಿನ ಕಡೆಗೆ ನಡೆದು ಹೋಗುತ್ತಿದ್ದ ವೇಳೆ ಬಾಳೆತೋಟದಿಂದ ದಿಢೀರ್ ದಾಳಿ ನಡೆಸಿದ ಕಾಡಾನೆ ಅವರನ್ನು ಸೊಂಡಿಲಿನಲ್ಲಿ ಎತ್ತಿ ಬಿಸಾಡಿದೆ ಪರಿಣಾಮ ಎದೆ, ಕೈ, ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದಿದೆ. ಈ ವೇಳೆ ಅವರು ಕಿರುಚಿಕೊಂಡಿದ್ದರಿಂದ ಅಕ್ಕಪಕ್ಕದಲ್ಲಿದ್ದವರು ತಕ್ಷಣವೇ ಸಹಾಯಕ್ಕೆ ಧಾವಿಸಿ ಹುಣಸೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಭಾಗದಲ್ಲಿ ಕಾಡಾನೆ ಹಾವಳಿ ತಡೆಯುವಲ್ಲಿ ಅರಣ್ಯ ಇಲಾಖೆ ಹಾಗೂ ಸರಕಾರದ ವೈಫಲ್ಯತೆ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ಗುರುಪುರ ಬಳಿ ಹುಣಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆಯಲ್ಲಿ ಟೈರ್‍ಗೆ ಬೆಂಕಿ ಹಾಕಿ, ರಸ್ತೆಗೆ ಅಡ್ಡಲಾಗಿ ಮರಗಳನ್ನಿಟ್ಟು ಮೂರು ಗಂಟೆಗಳ ಕಾಲ ಬಂದ್ ಮಾಡಿ ಪ್ರತಿಭಟಿಸಿ, ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲದೆ, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಕೆಲಕಾಲ ಅಡಚಣೆಯಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ವೃತ್ತ ನಿರೀಕ್ಷಕ ಪೂವಯ್ಯ, ಎಸ್.ಐ.ಶಿವಪ್ರಕಾಶ್, ಡಿ.ಸಿ.ಎಫ್.ಪೂವಯ್ಯ, ಆರ್.ಎಫ್.ಓ.ಗಳಾದ ರವೀಂದ್ರ, ಸಂದೀಪ್ ಭೇಟಿ ನೀಡಿದ್ದು, ಅವರ ಎದುರು ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದರಲ್ಲದೆ ಅರಣ್ಯಾಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.
ಈ ವೇಳೆ ಪ್ರಾದೇಶಿಕ ಅರಣ್ಯ ವಿಭಾಗದ ಪ್ರಭಾರ ಡಿ.ಸಿ.ಎಫ್. ಪೂವಯ್ಯ ಮಾತನಾಡಿ ಕಾಡಾನೆಗಳು ಹೊರದಾಟದಂತೆ ಹೆಚ್ಚಿನ ಕಾವಲು ಸಿಬ್ಬಂದಿಗಳನ್ನು ನೇಮಿಸಲಾಗುವುದು, ಗಾಯಾಳು ರಾಘವೇಂದ್ರರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಆಸ್ಪತ್ರೆ ಖರ್ಚು ವೆಚ್ಚವನ್ನು ಇಲಾಖೆ ವತಿಯಿಂದಲೇ ಭರಿಸಲಾಗುವುದೆಂದು ಭರವಸೆ ನೀಡಿದರು. ಬಳಿಕ ಪೊಲೀಸರು ರಸ್ತೆ ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.