ಕೆ.ಆರ್.ಪೇಟೆ: ಉಪಚುನಾವಣೆ ಸಮೀಪವಾಗುತ್ತಿದ್ದಂತೆಯೇ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದು ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿವೆ.
ಬಿಜೆಪಿ ಕಾರ್ಯಕರ್ತ ಕರ್ತೇನಹಳ್ಳಿ ಸುರೇಶ್ ಶೀಳನೆರೆ ಹೋಬಳಿಯ ಬೇಲದಕೆರೆಗೆ ನ.29 ರಂದು ಪ್ರಚಾರಕ್ಕೆ ರಾತ್ರಿ 8.30ರಲ್ಲಿ ಹೋದಾಗ ಜೆಡಿಎಸ್ ಕಾರ್ಯಕರ್ತ ಗಾಣದ ನಂಜಪ್ಪ ಅವರ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಅಡ್ಡಗಟ್ಟಿ ಕಬ್ಬಿಣದ ರಾಡಿನಿಂದ ಹೊಡೆದು, ಚಾಕು ಇರಿದು ಕೊಲೆ ಪ್ರಯತ್ನ ಮಾಡಿದರು. ಅವಾಚ್ಯ ಶಬ್ಧದಿಂದ ನಿಂದಿಸಿದರು.
ಗ್ರಾಮಕ್ಕೆ ಜೆಡಿಎಸ್ ಹೊರತು ಪಡಿಸಿ ಬಿಜೆಪಿರವರು ಬರವಂತಿಲ್ಲ. ಬಂದರೆ ಅವರನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು, ನಮ್ಮ ಕೂಗಾಟದಿಂದ ಸ್ಥಳಕ್ಕೆ ಬಂದ ಜನರು ನಮ್ಮನ್ನು ಬಿಡಿಸಿಕಳ್ಳಿಸಿದ್ದಾರೆ ಎಂದು ಆರೋಪಿಸಿ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚುವರಿ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.