ಮೈಸೂರು: ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು ಅರಣ್ಯದ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ರೈತರು ಬೆಳೆದಿದ್ದ ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ತಿಂದು ತುಳಿದು ನಾಶಗೊಳಿಸುತ್ತಿವೆ.
ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ರೈತರು ತಮ್ಮ ಕೃಷಿ ಜಮೀನಿನಲ್ಲಿ ಭತ್ತ, ರಾಗಿ, ಜೋಳ ಹಾಗೂ ತರಕಾರಿಗಳನ್ನು ಬೆಳೆದಿದ್ದರು. ಆದರೆ ಮೇಲಿಂದ ಮೇಲೆ ಕಾಡಾನೆಗಳು ಜಮೀನಿಗೆ ನುಗ್ಗುತ್ತಿವೆ. ಇದರಿಂದ ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಅರಣ್ಯ ಇಲಾಖೆಯು ಆನೆ ಹಾವಳಿ ನಿಯಂತ್ರಣಕ್ಕೆ ಆನೆ ಕಂದಕ ದುರಸ್ತಿ ಕಾರ್ಯ ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾಡಂಚಿನ ಗ್ರಾಮಗಳಲ್ಲಿ ನಿರಂತರವಾಗಿ ಕಾಡಾನೆಯ ದಾಳಿ ನಡೆಯುತ್ತಲೇ ಇದೆ.
ಈ ನಡುವೆ ಲಕ್ಷ್ಮಿಪುರ ಗ್ರಾಮಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಮುತ್ತುರಾಜ್ ಅವರ ಜಮೀನಿನಲ್ಲಿ ಬೆಳೆದಿದ್ದ ಶುಂಠಿ, ಚಂದ್ರಹಾಸರವರ ಒಂದು ಎಕರೆ ಹಾಗೂ ಗೋವಿಂದೇಗೌಡರ ಸೀನರವರ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆಯನ್ನು ತಿಂದು ತುಳಿದು ನಾಶಪಡಿಸಿವೆ.
ಇಷ್ಟಕ್ಕೂ ಕಾಡಾನೆಗಳು ಗ್ರಾಮಗಳಿಗೆ ನುಗ್ಗುತ್ತಿರುವುದಕ್ಕೆ ಕಾರಣವೇನು ಎನ್ನುವುದನ್ನು ನೋಡುವುದಾದರೆ ಈ ಬಾರಿಯ ಮಳೆಗಾಲದಲ್ಲಿ ಸುರಿದ ಬಾರಿ ಮಳೆಯಿಂದಾಗಿ ಅರಣ್ಯದ ಸುತ್ತ ತೆಗೆದಿದ್ದ ಆನೆ ಕಂದಕಗಳು ಮುಚ್ಚಿ ಹೋಗಿದ್ದು, ಇದರಿಂದ ಅರಣ್ಯದಂಚಿನ ಮುದ್ದನಹಳ್ಳಿ, ಉತ್ತೇನಹಳ್ಳಿ, ಅಳಲೂರು, ಗ್ರಾಮಗಳಿಗೆ ನುಗ್ಗುತ್ತಲೇ ಇವೆ. ಇವುಗಳನ್ನು ತಡೆಯುವುದು ರೈತರಿಗೆ ಕಷ್ಟವಾಗುತ್ತಿದೆ.
ರಾತ್ರಿಯೆಲ್ಲ ಜಮೀನಿನಲ್ಲಿ ಕಾವಲು ಕಾಯುವುದು ಕೂಡ ಕಷ್ಟವಾಗುತ್ತಿದೆ. ಹಿಂಡಾಗಿ ಬರುವ ಕಾಡಾನೆಗಳು ಎಲ್ಲೆಂದರಲ್ಲಿ ಸಂಚರಿಸುತ್ತಾ ಬೆಳೆಗಳನ್ನು ತಿಂದು, ತುಳಿದು ಕೂಡ ನಾಶ ಪಡಿಸುತ್ತಿವೆ. ಇದರಿಂದ ಸಾಲ ಮಾಡಿ, ಕಷ್ಟಪಟ್ಟು ಬೆಳೆ ಬೆಳೆದ ರೈತರು ಫಸಲು ಬರುವ ಸಮಯದಲ್ಲಿ ಬೆಳೆ ಕಾಡಾನೆಗಳ ಪಾಲಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಕಾಡಾನೆಗಳು ಲಗ್ಗೆಯಿಟ್ಟ ಪ್ರದೇಶಗಳಿಗೆ ಹುಣಸೂರು ಪ್ರಾದೇಶಿಕ ಅರಣ್ಯ ಇಲಾಖೆ ಆನೆ ಚೌಕೂರು ವಲಯದ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಕೂಡಲೇ ಅರಣ್ಯ ಇಲಾಖೆ ಕ್ರಮ ಕೈಗೊಂಡು ಅರಣ್ಯದಿಂದ ಕಾಡಾನೆಗಳು ನಾಡಿನತ್ತ ಬಾರದಂತೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಯಾವ ಸಂದರ್ಭದಲ್ಲಿ ಕಾಡಾನೆಗಳು ಅರಣ್ಯದಿಂದ ನಾಡಿನತ್ತ ಬರುತ್ತವೆ ಎಂಬುದು ಅರಿಯದ ರೈತರು ಜಮೀನಿಗೆ ತೆರಳಲು ಭಯಪಡುವಂತಾಗಿದೆ.