News Kannada
Monday, September 26 2022

ಮೈಸೂರು

ಭರದಿಂದ ಸಾಗಿರುವ ಅರಮನೆ ಬಲ್ಬ್‌ ಬದಲಿಸುವ ಕಾರ್ಯ  - 1 min read

Photo Credit :

ಭರದಿಂದ ಸಾಗಿರುವ ಅರಮನೆ ಬಲ್ಬ್‌ ಬದಲಿಸುವ ಕಾರ್ಯ 

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜಿಲ್ಲಾಡಳಿತ  ಸರಳ ಸುಸೂತ್ರ ಆಚರಣೆಗೆ  ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗಜಪಡೆಗೆ ಅರಮನೆ ಆವರಣದಲ್ಲಿ  ತಾಲೀಮು ನಡೆಯುತಿದ್ದು ಮತ್ತೊಂದೆಡೆ  ಅರಮನೆಯಲ್ಲೂ ದಸರಾ ಅಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ರಾಜವಂಶಸ್ಥರು ಪೂಜಾ ಕೈಂಕರ್ಯಗಳಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅರಮನೆ ಆಡಳಿತ ಮಂಡಳಿ ಕೆಟ್ಟಿರುವ ಬಲ್ಪ್ ಗಳನ್ನು ಬದಲಿಸುತ್ತಿದೆ.

ಅರಮನೆಯ ಸುವರ್ಣ ಬಣ್ಣದಲ್ಲಿ ಜಗಮಗಿಸುವ ವಿದ್ಯುತ್ ದೀಪಾಲಂಕಾರ, ಕಣ್ಮನ ಸೆಳೆಯುವ ವಾಸ್ತುಶಿಲ್ಪ ನೋಡುಗರ ಮನಸೂರೆಗೊಳ್ಳುತ್ತದೆ. ಈ ಕಾರಣದಿಂದಲೇ ಪ್ರತಿನಿತ್ಯ ಅರಮನೆಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಅರಮನೆಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೋನಾ ಎಲ್ಲರ ಸಂತಸ ಸಂಭ್ರಮವನ್ನೂ ಕಸಿದುಕೊಂಡಿದೆ.

ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಅರಮನೆಗೆ ಭೇಟಿ ನೀಡಿ, ಸಂಜೆ ವೇಳೆ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುವ ಅರಮನೆಯ ಅಂದವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿರುತ್ತಿದ್ದರು. ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ರಾತ್ರಿ 7 ಗಂಟೆಯಿಂದ 8ರವರೆಗೆ ವಿದ್ಯುತ್ ದೀಪಾಲಂಕಾರವಿರುತ್ತಿತ್ತು, ಅರಮನೆ ಇಂದ್ರಲೋಕದಂತೆ ಭಾಸವಾಗುತ್ತಿತ್ತು. ಆದರೆ ಈ ಬಾರಿ ಕೊರೋನಾದಿಂದ ಪ್ರವಾಸಿಗರು ಬರುವುದು ಕಷ್ಟಸಾಧ್ಯವಾದರೂ ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ಅನುಮತಿಯಿಲ್ಲ.

ದಸರಾ ಸಂದರ್ಭದಲ್ಲಿ ರಾತ್ರಿ 7ರಿಂದ 9 ಗಂಟೆವರೆಗೆ 2 ಗಂಟೆಗಳ ದೀಪಾಲಂಕಾರವಿರಲಿದೆ. ಅರಮನೆ ಹಾಗೂ ಅದರ ಕಾಂಪೌಂಡ್ಗೆ 1 ಲಕ್ಷ ಬಲ್ಪ್ಗಳನ್ನು  ಅಳವಡಿಸಿದ್ದು, ಪ್ರತೀ ವರ್ಷವೂ ಕೆಟ್ಟ ಬಲ್ಪ್ ಗಳನ್ನು ಬದಲಿಸಲಾಗುತ್ತದೆ. ಪ್ರತಿಬಾರಿಯೂ ಅರಮನೆಗೆ ಅಳವಡಿಸಿರುವ ಬಲ್ಪ್ ಗಳಲ್ಲಿ ಶೇ.10ರಷ್ಟು ಬಲ್ಪ್ ಗಳನ್ನು ಬದಲಿಸಲಾಗುತ್ತಿದೆ. ಎತ್ತರದಲ್ಲಿರುವ ಬಲ್ಪ್ ಗಳನ್ನು ಕ್ರೇನ್ ಹಾಗೂ ಡ್ರೋನ್ ಸಹಾಯದಿಂದ  ಬದಲಾವಣೆ ಮಾಡುವ ಕಾರ್ಯ ಭರದಿಂದ ಸಾಗಿದೆ.

ಇತ್ತೀಚೆಗೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಅರಮನೆಗೆ ಅಳವಡಿಸಿರುವ  ನೂರಾರು  ಬಲ್ಪ್ ಗಳು ಕೆಟ್ಟು ಹೋಗಿವೆ. 

ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ 1942ರ ಸುಮಾರಿನಲ್ಲಿ ಅರಮನೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿಸಲಾಯಿತು. ತೇಗದ ಮರದ ಪಟ್ಟಿಗಳ ಮೇಲೆ ಜೋಡಿಸಿ ಸುಮಾರು ಒಂದು ಲಕ್ಷ ಕ್ಯಾಂಡಿಸೆಂಟ್ ಬಲ್ಪ್ ಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ 30 ವ್ಯಾಟ್ ಬಲ್ಪ್ ಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ 20 ವ್ಯಾಟ್ ಗೆ ಇಳಿಸಲಾಯಿತು. ಪ್ರಸ್ತುತ 15 ವ್ಯಾಟ್ ನ ಬಲ್ಬ್ ಗಳನ್ನು ಅಳವಡಿಸಲಾಗಿದೆ. ನಿರ್ವಹಣೆಗಾಗಿ ಅರಮನೆಯ ಪವರ್ ಹೌಸ್ ನಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಅರಮನೆ ಹಾಗೂ ಗೇಟ್ ಗಳಿಗೆ ಮೂರು ಪ್ರತ್ಯೇಕ ಸ್ವಿಚ್ ಗಳಿವೆ. ದೀಪಾಲಂಕಾರದ ವೇಳಾಪಟ್ಟಿಯಂತೆ ಸಿಬ್ಬಂದಿಗಳು ಏಕಕಾಲಕ್ಕೆ ಮೂರು ಸ್ವಿಚ್ಗಳನ್ನು ಆನ್ ಮಾಡುತ್ತಾರೆ. ಸ್ವಿಚ್ ಹಾಕಿದ ಕೂಡಲೇ ಇಡೀ ಅರಮನೆ ಚಿನ್ನದ ಬಣ್ಣದಿಂದ ಬೆಳಗಿ ಸ್ವರ್ಗವೇ ಧರೆಗಿಳಿದಂತೆ ಕಂಗೊಳಿಸುತ್ತದೆ.

ಅಷ್ಟೇ ಅಲ್ಲದೇ ನಗರದ ಪ್ರಮುಖ ವೃತ್ತಗಳಲ್ಲಿಯೂ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸುವ , ವೈರ್‌ ಗಳ ಮಾಲೆಗಳನ್ನು ಇಳಿ ಬಿಡುವ ಕಾರ್ಯ ಭರದಿಂದ ಸಾಗಿದೆ.

See also  ಮೈಸೂರು ಮೃಗಾಲಯಕ್ಕೆ ಹರಿದು ಬರುತ್ತಿರುವ ನೆರವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು