ಮೈಸೂರು: ಇಲ್ಲಿನ ಹೆಚ್ ಡಿ ಎಫ್ ಸಿ ಬ್ಯಾಂಕ್ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜನ್ನು ಒಡೆದ ಖದೀಮರು ಕಾರಿನಲ್ಲಿದ್ದ ಹತ್ತು ಲಕ್ಷ ರೂ.ನಗದನ್ನು ದೋಚಿ ಪರಾರಿಯಾಗಿರುವ ಘಟನೆ ವಿವಿಪುರಂನಲ್ಲಿ ನಡೆದಿದೆ.
ಪಿರಿಯಾಪಟ್ಟಣದಲ್ಲಿ ಆಭರಣದ ಅಂಗಡಿ ಇಟ್ಟುಕೊಂಡಿರುವ ಮನೋಜ್ ಕುಮಾರ್ ಅವರು ಆಭರಣ ಖರೀದಿಗೆಂದು ಕಾರಿನಲ್ಲಿ ಬಂದಿದ್ದಾರೆ. ಹಣ ಡ್ರಾ ಮಾಡಿ ಕಾರಿನಲ್ಲಿರಿಸಿ ಲಾಕ್ ಮಾಡಿ ತಮ್ಮ ಖಾತೆಯ ಸ್ಟೇಟ್ ಮೆಂಟ್ ಪಡೆಯಲು ಪುನಃ ಬ್ಯಾಂಕಿಗೆ ಹೋಗಿದ್ದಾರೆ. ಒಂದು ಗಂಟೆಯ ನಂತರ ಬಂದು ನೋಡಿದಾಗ ಚಾಲಕ ಕುಳಿತುಕೊಳ್ಳುವ ಕಿಟಕಿಯ ಬದಿ ಪೂರ್ಣ ಗಾಜನ್ನು ಒಡೆದು ಹಣ ಕಳುವು ಮಾಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು ಕಳುವು ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.