ಮೈಸೂರು: ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಮೇಲೆ ಅಸಮಾಧಾನ ಇದ್ದರೆ ಸಭೆ ನಡೆಸಿ ಚರ್ಚಿಸಲಿ. ಅದನ್ನು ಬಿಟ್ಟು ಅವರು ಎಲ್ಲರ ಮೇಲೂ ಸವಾರಿ ಮಾಡುತ್ತಿದ್ದಾರೆ ಎನ್ನುವುದು, ಮಹಾರಾಣಿ ಎನ್ನುವುದು ಸರಿಯಲ್ಲ. ಮಂಜುನಾಥ್ ಅವರು ಹೇಳಿದಾಕ್ಷಣ ಜಿಲ್ಲಾಧಿಕಾರಿ ಮಹಾರಾಣಿ ಆಗುವುದಿಲ್ಲ ಎಂದು ಶಾಸಕ ಎಲ್.ನಾಗೇಂದ್ರ ತಿರುಗೇಟು ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ. ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಆಗುವುದು ಸಹಜ. ಆಡಳಿತಾತ್ಮಕ ವಿಚಾರಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ನನ್ನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ಜಿಲ್ಲಾಧಿಕಾರಿ ಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದೇನು ನನಗೆ ತಿಳಿದಿಲ್ಲ. ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ವ್ಯತ್ಯಾಸಗಳು ಬಂದಾಗ ಕುಳಿತು, ಮಾತನಾಡಿ ಬಗೆಹರಿಸಿಕೊಳ್ಳಬೇಕು. ಸಾ.ರಾ.ಮಹೇಶ್ ಸಹ ಸಚಿವರಾಗಿದ್ದವರು. ಅವರು ಸಲಹೆ, ಸೂಚನೆಗಳನ್ನು ನೀಡಿ ಜಿಲ್ಲಾಧಿಕಾರಿಯೊಂದಿಗೆ ಅಭಿವೃದ್ಧಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ತಿಳಿಸಿದರು