ಮೈಸೂರು: ಈ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಜಿಲ್ಲೆಯಲ್ಲಿ 12 ಕಡೆ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆ ಮೈಸೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಕಾರ್ಯಪಡೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಉತ್ತಮ ಗುಣಮಟ್ಟದ ಭತ್ತವನ್ನು ಖರೀದಿಸಲು ಕ್ರಮವಹಿಸಲಾಗಿದೆ ಎಂದಿದ್ದಾರೆ.
ಮೈಸೂರಿನ ಬಂಡೀಪಾಳ್ಯದಲ್ಲಿರುವ ಎಪಿಎಂಸಿ ಆವರಣ, ಬಿಳಿಗೆರೆ ಖರೀದಿ ಕೇಂದ್ರ, ನಂಜನಗೂಡು ಎಪಿಎಂಸಿ ಆವರಣ, ತಿ.ನರಸೀಪುರ, ಬನ್ನೂರು, ಹುಣಸೂರು, ಹುಣಸೂರು ತಾಲೂಕಿನ ರತ್ನಪುರಿ, ಕೆ.ಆರ್.ನಗರ ಎಪಿಎಂಸಿ ಆವರಣಗಳಲ್ಲಿ ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯ ಉಗ್ರಾಣ, ಸರಗೂರು, ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಎಪಿಎಂಸಿ ಆವರಣಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ರೈತರು ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಬೇಕು ಇಂದಿನಿಂದ ಡಿ.30ರವರೆಗೆ ನೋಂದಣಿ ಮಾಡಲಾಗುವುದು. ಡಿ.20ರಿಂದ 2021ಮಾರ್ಚ್ 20ರ ತನಕ ಭತ್ತ ಖರೀದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹೆಸರು ನೋಂದಾಯಿಸಿಕೊಂಡ ರೈತರಿಂದ ಮಾತ್ರ ಗರಿಷ್ಠ 40 ಕ್ವಿಂಟಲ್(ಪ್ರತಿ ಎಕರೆಗೆ 16ಕ್ವಿಂಟಲ್ ನಂತೆ) ಭತ್ತವನ್ನು ಖರೀದಿಸಲಾಗುವುದು. ಭತ್ತ ಖರೀದಿಸಲು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿಯನ್ನು ಏಜೆನ್ಸಿಯಾಗಿ ನೇಮಿಸಿದ್ದು ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್ ಗೆ ಕನಿಷ್ಠ ಬೆಂಬಲ ಬೆಲೆ 1,868 ಹಾಗೂ ಗ್ರೇಡ್ ಎ ಭತ್ತಕ್ಕೆ 1,888ನಿಗದಿಪಡಿಸಲಾಗಿದೆ ಎಂದಿದ್ದಾರೆ.