ಮೈಸೂರು: ಕೊರೋನ ಸಾಂಕ್ರಮಿಕವು ಹರಡದಂತೆ ತಡೆಗಟ್ಟಲು ಸರ್ಕಾರವು ಕೋಟ್ಯಾಂತರ ರೂಪಾಯಿಗಳನ್ನು ನಿತ್ಯ ವ್ಯಯಿಸುತ್ತಿದೆ. ಸಾಕಷ್ಟು ಜನ ಜಾಗೃತಿ ಕಾರ್ಯಕ್ರಮಗಳು , ಮಾಧ್ಯಮಗಳ ಮುಖಾಂತರವೂ ಜನರಿಗೆ ಕೊರೋನದಿಂದ ರಕ್ಷಿಸಿಕೊಳ್ಳುವುದರ ಬಗ್ಗೆ ಸಲಹೆಗಳನ್ನೂ ನೀಡುತ್ತಿದೆ. ಅಲ್ಲದೆ ಇದನ್ನು ಪಾಲಿಸದವರ ಮೇಲೆ ದಂಡವನ್ನೂ ವಿಧಿಸುತ್ತಿದೆ. ಆದರೆ ಜನರು ಮಾತ್ರ ತಮ್ಮ ಪ್ರಾಣ ಉಳಿಸಿಕೊಳ್ಳಲು ಮಾಸ್ಕ್ ಧರಿಸದೇ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ದಂಡ ಕಟ್ಟಿ ಆದಾಯ ಮಾಡಿಕೊಡುತಿದ್ದಾರೆ.
ಸರ್ಕಾರದ ಮಾರ್ಗ ಸೂಚಿಯನ್ನು ಪಾಲಿಸದೇ ಜನರು ಬರೋಬ್ಬರಿ 60 ಲಕ್ಷ ರೂ. ದಂಡವನ್ನು ಪಾವತಿಸಿದ್ದಾರೆ. ವಿಶೇಷ ಎಂದರೆ ಎರಡನೇ ಅಲೆ ಆತಂಕ ಇರುವುದರಿಂದ ಪೊಲೀಸರ ತಪಾಸಣೆ ತೀವ್ರಗೊಂಡ ಕಳೆದ 15 ದಿನದಲ್ಲಿಯೇ 10 ಸಾವಿರಕ್ಕೂ ಹೆಚ್ಚು ಜನರು 19 ಲಕ್ಷ ರೂ. ದಂಡವನ್ನು ಪಾವತಿಸಿದ್ದಾರೆ. 20 ರೂ. ಮಾಸ್ಕ್ ಧರಿಸದೇ 200 ರೂ. ದಂಡ ಪಾವತಿಸಲು ಸಿದ್ದವಾಗಿದೆ ಜನರ ಮನಸ್ಥಿತಿ.
ಮೈಸೂರು ನಗರ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಪ್ರತಿ ದಿನವೂ ಪೊಲೀಸರು ಒಂದಿಲ್ಲೊಂದು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಗರದ ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ಆಯುರ್ವೇದ ವೃತ್ತ, ರಾಮಸ್ವಾಮಿ ವೃತ್ತ, ಗನ್ಹೌಸ್, ಚಿಕ್ಕಗಡಿಯಾರ ವೃತ್ತ ಸೇರಿದಂತೆ ವಿವಿಧೆಡೆ ಸಾರ್ವಜನಿಕರು, ಪ್ರಯಾಣಿಕರು, ವಾಹನ ಚಾಲಕರಿಗೆ ಕೊರೊನಾದಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಜತೆಗೆ ಕೋವಿಡ್-19 ಜಾಗೃತಿ ನಾಮಫಲಕಗಳನ್ನೂ ಅಳವಡಿಸಲಾಗುತ್ತಿದೆ. ವ್ಯಾಪಾರ ಸಂಘಟನೆಗಳೊಂದಿಗೆ ಸಭೆ ನಡೆಸಿ ನಿಯಮ ಪಾಲಿಸುವಂತೆ ಮನವಿ ಮಾಡುವುದು ಹಾಗೂ ನಿಯಮ ಉಲ್ಲಂಘಿಸಿದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ .
ಕಳೆದ 6 ತಿಂಗಳಿನಿಂದ ನ.16ರ ವರೆಗೆ 17,961 ಪ್ರಕರಣಗಳಿಂದ 41 ಲಕ್ಷ ರೂ. ದಂಡ ಶುಲ್ಕ ಸಂಗ್ರಹಿಸಲಾಗಿದೆ. ಆದರೆ, ನ.16 ರಿಂದ ಡಿ.1ರ ವರೆಗೆ ಹೆಚ್ಚುವರಿ ಪ್ರಕರಣಗಳೂ ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ 28,074 ಕ್ಕೆ ಏರಿಕೆಯಾಗಿದ್ದು, 59,91,650 ರೂ. ದಂಡ ವಿಧಿಸಲಾಗಿದೆ. ಅಲ್ಲದೆ, ಕೋವಿಡ್ ವಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧವೂ ಕ್ರಿಮಿನಲ್ ಪ್ರಕರಣ (ನ.16ರ ವರೆಗೆ ಕೆ.ಆರ್.ಪೊಲೀಸ್ ಠಾಣೆುಂಲ್ಲಿ ಇಬ್ಬರ ವಿರುದ್ಧ ಪ್ರಕರಣ) ದಾಖಲಿಸಿ ಜನರನ್ನು ಸ್ವಯಂ ಜಾಗೃತರನ್ನಾಗಿ ಮಾಡಲಾಗುತ್ತಿದೆ.
ಸಾರ್ವಜನಿಕ ಅಂತರ ಕಾಯ್ದುಕೊಳ್ಳದೇ ಅಂಗಡಿ ಮುಂಗಟ್ಟುಗಳ ಎದುರು ಗುಂಪು ಸೇರಿ ವ್ಯಾಪಾರ ಮಾಡುತ್ತಿದ್ದ ಆಟೋ ಮೊಬೈಲ್ ಅಂಗಡಿ ಮತ್ತು ಟೀ ಅಂಗಡಿ ಅವರ ವಿರುದ್ಧ ಡಿಎಂಎ ಆಕ್ಟ್ 511 ಹಾಗೂ ಐಪಿಸಿ 269ರ ಅನ್ವಯ ಪ್ರಕರಣ ದಾಖಲಿದ್ದು, ಈ ಮೂಲಕ ಕೋವಿಡ್ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಲು ವಿನಾಯಿತಿ ನೀಡಿದ್ದ ಪೊಲೀಸರು, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸಂಚಾರ ತಪಾಸಣೆ ತೀವ್ರಗೊಳಿಸಿದ್ದಾರೆ.
ಕೊರೊನಾ ನಿಯಂತ್ರಿಸಲು ಪೊಲೀಸರು ನಿತ್ಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ನಾಗರಿಕರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಪೊಲೀಸರಿಗೆ ಸಹಕಾರ ನೀಡಿ ಜೀವ ಕಾಪಾಡಿಕೊಳ್ಳಬೇಕು. ಸಾರ್ವಜನಿಕ ಅಂತರ ಪಾಲನೆ ಮಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಬಳಸಬೇಕು ಎಂದು ಡಿಸಿಪಿ ಗೀತಾ ಹೇಳುತ್ತಾರೆ.