ಮೈಸೂರು ; ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳ ಹಿಂಡಿನಿಂದ ಬೇರ್ಪಟ್ಟಿದ್ದ ಆನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗರಹೊಳೆ ಉದ್ಯಾನವನದ ವೀರನಹೊಸಹಳ್ಳಿ ವಲಯದ ಮಾಸ್ತಿಗುಡಿ ಗಿರಿಜನ ಪುನರ್ವಸತಿ ಕೇಂದ್ರದ ಹತ್ತಿರದ ಹೊಸಹಳ್ಳಿ ಕೃಷ್ಣ ಅವರ ಜಮೀನಿನಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಕಾಡಿಗಟ್ಟುವ ವೇಳೆ ಗೆ ಮರಿ ಆನೆಯೊಂದು ಹಿಂಡಿನಿಂದ ಬೇರ್ಪಟ್ಟಿತ್ತು.
ಈ ಕುರಿತು ಮಾಹಿತಿ ಪಡೆದ ಅರಣ್ಯ ಸಿಬ್ಬಂದಿ ಮರಿಯನ್ನು ರಕ್ಷಿಸಿ, ಆರೈಕೆ ಮಾಡಿ, ಡಿಸಿಎಫ್ ಮಹೇಶ್ ಕುಮಾರ್, ಎಸಿಎಫ್ ಸತೀಶ್ ಅವರ ಮಾರ್ಗದರ್ಶನದಂತೆ ರಾತ್ರಿ ವೇಳೆ ಆನೆಗಳ ಹಿಂಡು ವಾಪಾಸ್ ಹೋಗಿದ್ದ ಸ್ಥಳದಲ್ಲಿ ಕಾದು ಹಿಂಡು ಕಾಣಿಸಿಕೊಂಡ ನಂತರ ಮರಿಯನ್ನು ಹಿಂಡಿನೊಂದಿಗೆ ಸೇರಿಸಿದ್ದಾರೆ.
ತನ್ನ ತಾಯಿಯನ್ನು ನೋಡುತಿದ್ದಂತೆ ಅದರತ್ತ ಧಾವಿಸಿದ ಮರಿ ಆನೆ ಮತ್ತು ತಾಯಿ ಆನೆಯ ಸಮ್ಮಿಲನ ಹೃದಯಸ್ಪರ್ಷಿ ಆಗಿತ್ತು ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.