ಚಾಮರಾಜನಗರ: ಆ ಒಂದು ಜೋಡಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಯ ಹೊಳೆಯಲ್ಲಿ ತೇಲಾಡುತಿತ್ತು. ಪ್ರೀತಿಯ ಮುಂದಿನ ಘಟ್ಟವಾದ ದಾಂಪತ್ಯ ಜೀವನಕ್ಕೆ ಕಾಲಿಡಲೂ ಯೋಜನೆ ಹಾಕಿಕೊಂಡಿತ್ತು. ಅಷ್ಟರಲ್ಲೆ ಅವರ ಪ್ರೀತಿಯ ಬಳ್ಳಿಗೆ ಮಚ್ಚಿನೇಟು ನೀಡಿದ ಯುವತಿಯ ಅಣ್ಣ ಸ್ವತಃ ತಂಗಿಯ ಕೈಬೆರಳುಗಳನ್ನು ಕತ್ತರಿಸಲು ವಿಫಲ ಯತ್ನ ನಡೆಸಿದ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಿ.ಜಿ ಪಾಳ್ಯದಲ್ಲಿ ನಡೆದಿದೆ.
ಇಲ್ಲಿನ ನಿವಾಸಿಗಳಾದ ಸತ್ಯ ಹಾಗೂ ಧನಲಕ್ಷ್ಮಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ವಿಚಾರ ಯುವತಿಯ ಪೋಷಕರಿಗೆ ತಿಳಿದು ಅವರು ತೀವ್ರವಾಗಿ ವಿರೋಧಿಸಿದ್ದರಲ್ಲದೆ ಆತನನ್ನು ನೋಡಕೂಡದು ಎಂದು ತಾಕೀತು ಮಾಡಿದ್ದರು. ಮನೆಯವರ ತೀವ್ರ ವಿರೋಧದ ನಡುವೆಯೂ ಪ್ರೇಮಿಗಳು ಮದುವೆಗೆ ಮುಂದಾಗಿದ್ದರು. ಇದರಿಂದ ಆಕ್ರೋಶಗೊಂಡ ಯುವತಿಯ ತಂದೆ ಹಾಗೂ ಅಣ್ಣನೇ ಮಚ್ಚಿನಿಂದ ಯುವತಿಯ ಮೇಲೆ ಗಂಭಿರ ಹಲ್ಲೆ ನಡೆಸಿದ್ದಾರೆ.
ಗ್ರಾಮದ ಮೆಡಿಕಲ್ ಸ್ಟೋರ್ ಮುಂಭಾಗದಲ್ಲಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಧನಲಕ್ಷ್ಮೀ ಮೇಲೆ ಹಲ್ಲೆ ಮಾಡಲು ಆಕೆಯ ತಂದೆ ಶಿವಸ್ವಾಮಿ ಹಾಗೂ ಅಣ್ಣ ಮಹೇಂದ್ರ ಮಚ್ಚು, ಕುಡಗೋಲು ಹಿಡಿದು ಬಂದಿದ್ದರು. ಅಲ್ಲದೆ ಮೆಡಿಕಲ್ ಮುಂಭಾಗದಲ್ಲಿದ್ದ ಧನಲಕ್ಷ್ಮಿ ಮೇಲೆ ಕುಡುಗೋಲಿನಿಂದ ಏಕಾಏಕಿ ಹಲ್ಲೆ ಮಾಡಿದ್ದಾರೆ.
ಹಲ್ಲೆಯ ಪರಿಣಾಮ ಯುವತಿ ಕೈಯ 4 ಬೆರಳುಗಳೇ ತುಂಡಾಗುವ ಸ್ಥಿತಿಗೆ ಬಂದಿವೆ. ಈಗ ಯುವತಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲದೆ ತನ್ನ ಹಾಗೂ ಪ್ರಿಯತಮನ ಪ್ರಾಣ ರಕ್ಷಿಸುವಂತೆ ಪೋಲೀಸರನ್ನು ಕೋರಿದ್ದಾಳೆ.
ಘಟನೆ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತಿದ್ದಾರೆ