ಕೃಷ್ಣರಾಜಪೇಟೆ. ತಾಲೂಕಿನ ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಖ್ಯಾತವಾಗಿರುವ ಕಿಕ್ಕೇರಿ ಹೋಬಳಿಯ ಸಾಸಲು ಶ್ರೀಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ಕ್ಷೇತ್ರದಲ್ಲಿ ಕಾರ್ತೀಕ ಸೋಮವಾರದ ಅಂಗವಾಗಿ ಭಕ್ತಸಾಗರವೇ ಶ್ರೀಕ್ಷೇತ್ರಕ್ಕೆ ಹರಿದು ಬಂದಿತ್ತು.
ಸರ್ಪದೋಷ, ನಾಗದೋಷ, ಕಜ್ಜಿ ಸೇರಿದಂತೆ ಚರ್ಮ ರೋಗಗಳಿಗೆ ಸಂಜೀವಿನಿಯಾಗಿ ಔಷಧೀಯ ಗುಣಗಳನ್ನು ಹೊಂದಿರುವ ಪವಿತ್ರ ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು ಸರತಿಯ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಧರಿಸಿ ಶ್ರೀ ಸೋಮೇಶ್ವರನ ದರ್ಶನ ಮಾಡಿ ಪುಳಕಿತರಾದರು.
ಮಂಡ್ಯ ಜಿಲ್ಲೆಯಲ್ಲಿ ಬಯಲು ಸೀಮೆಯ ಸುಬ್ರಹ್ಮಣ್ಯವೆಂದೇ ಪ್ರಸಿದ್ಧವಾಗಿರುವ ಸಾಸಲು ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ಕ್ಷೇತ್ರವು ಸರ್ಪದೋಷದ ನಿವಾರಣೆಗೆ ಹಾಗೂ ಚರ್ಮ ವ್ಯಾಧಿಯ ನಿರ್ಮೂಲನೆಗೆ ರಾಜ್ಯದಾದ್ಯಂತ ಹೆಸರು ವಾಸಿಯಾಗಿದೆ. ಮೈಸೂರು, ಬೆಂಗಳೂರು, ಶಿವಮೊಗ್ಗ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾಸಲು ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಪವಿತ್ರ ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡಿ, ಕಲ್ಯಾಣಿಯ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಭಕ್ತಿಯಿಂದ ತೆರಳುವುದು ಇಲ್ಲಿನ ಸಂಪ್ರದಾಯವಾಗಿದೆ. ಶ್ರೀಕ್ಷೇತ್ರವು ದಿನದಿಂದ ದಿನಕ್ಕೆ ಪ್ರಖ್ಯಾತಿಯಾಗುತ್ತಿದೆ. ದೇವಾಲಯದ ಪ್ರಧಾನ ಅರ್ಚಕರಾದ ಶಂಭುಲಿಂಗಪ್ಪ ಅವರು ಬ್ರಾಹ್ಮಿಮುಹೂರ್ತದಲ್ಲಿ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿ ಪೂಜೆ ಪುರಸ್ಕಾರಗಳನ್ನು ನೆರವೇರಿಸಿ ಸಾರ್ವಜನಿಕರ ದರ್ಶನಕ್ಕೆ ಅನುವುಮಾಡಿಕೊಟ್ಟರು.
ಉಪತಹಶೀಲ್ದಾರ್ ಲಕ್ಷ್ಮೀಕಾಂತ್ ಅವರ ನೇತೃತ್ವದಲ್ಲಿ ಮುಜರಾಯಿ ಅಧಿಕಾರಿಗಳು ಭಕ್ತರ ದರ್ಶನಕ್ಕೆ ಸುಮಗವಾಗಿ ಹೋಗಿ ಬರುವಂತೆ ಅನುಕೂಲ ಕಲ್ಪಿಸಿಕೊಟ್ಟಿದ್ದರಿಂದಾಗಿ ಯಾವುದೇ ನೂಕು ನುಗ್ಗಲು ಇಲ್ಲದಂತೆ ಭಕ್ತರು ದೇವರ ದರ್ಶನ ಮಾಡಿದ್ದು ವಿಶೇಷವಾಗಿತ್ತು. ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಪುಟಾಣಿ ಮಕ್ಕಳಿಗೆ ದೇವಾಲಯ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಹಾಲಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು. ಕಿಕ್ಕೇರಿ ಪೋಲಿಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ನವೀನ್ ಅವರು ಸರ್ಕಲ್ ಇನ್ಸ್ಪೆಕ್ಟರ್ ದೀಪಕ್ ಮತ್ತು ನಾಗಮಂಗಲ ಡಿವೈಎಸ್ಪಿ ನವೀನ್ಕುಮಾರ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.