ಮೈಸೂರು: ಭತ್ತದ ಬೆಳೆಯ ಕಟಾವು ಪ್ರಾರಂಭವಾಗಿದ್ದು, ಕೋವಿಡ್ 19 ಸಂದರ್ಭದಲ್ಲಿ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ. ಆದ್ದರಿಂದ ಭತ್ತಕಟಾವು ಯಂತ್ರದ ಬಾಡಿಗೆ ದರವನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,02000 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯ ಕ್ಷೇತ್ರ ಆವರಿಸಿದ್ದು, ಸದ್ಯ ಭತ್ತದ ಬೆಳೆಯ ಕಟಾವು ಪ್ರಾರಂಭವಾಗಿದೆ. ಜಿಲ್ಲೆಯ ಶೇ.95% ರೈತರು ಭತ್ತದ ಬೆಳೆಯನ್ನು ಭತ್ತಕಟಾವು ಯಂತ್ರಗಳ (Combined Harvestor) ಮೂಲಕ ಕಟಾವು ಮಾಡುತ್ತಿದ್ದು, ರೈತರು ತಮ್ಮ ಸಮೀಪದ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುವ ಭತ್ತಕಟಾವು ಯಂತ್ರಗಳ ಪ್ರಯೋಜನವನ್ನು ಪಡೆಯಬಹುದು.
ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಪ್ರತಿಘಂಟೆಗೆ 2,500 ರೂ.ನಿಂದ 3,000ರೂ.ಗಳವರೆಗೆ ಬಾಡಿಗೆ ಹಣ ನಿಗದಿ ಪಡಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ. ಆದ್ದರಿಂದ ಭತ್ತ ಕಟಾವು ಯಂತ್ರದ ಬಾಡಿಗೆ ದರವನ್ನು ನಿಗದಿಪಡಿಸಲಾಗಿದೆ.
ಕೋವಿಡ್-19 ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ಚೈನ್ ಟೈಪ್ ಭತ್ತ ಕಟಾವು ಯಂತ್ರಕ್ಕೆ ಪ್ರತಿ ಘಂಟೆಗೆ 2,300ರೂ. ಟೈರ್ ಟೈಪ್ ಭತ್ತಕಟಾವು ಯಂತ್ರಕ್ಕೆ ಪ್ರತಿಘಂಟೆಗೆ 1,500ರೂ.ಮೀರದಂತೆ ಬಾಡಿಗೆಯನ್ನು ನಿಗದಿ ಮಾಡಬೇಕು. ತಪ್ಪಿದಲ್ಲಿ ಭತ್ತ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೋವಿಡ್-19 ಸಂಕಷ್ಟದ ದಿನಗಳಲ್ಲಿ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.