ಮೈಸೂರು: ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಭಾರತ್ ಬಂದ್ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ಗೆ ಹಲವು ಸಂಘಟನೆಗಳು ಸಂಪೂರ್ಣ ಹಾಗೂ ಕೆಲ ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ. ನಗರದಲ್ಲಿ ಇಂದು ಬೆಳಿಗ್ಗೆ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಆದರೆ, ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ಗಳು ಸಂಚಾರ ಆರಂಭಿಸಿದ್ದವು. ಇದೇ ಭಾಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಕೆಲಹೊತ್ತಿನ ನಂತರ ರೈತರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಬೀದಿಗಳಿದು ಪ್ರತಿಭಟನೆ ನಡೆಸಲು ಮುಂದಾದರು. ಅಲ್ಲದೇ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೊರಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆ ದೇವರಾಜ ಮಾರುಕಟ್ಟೆ, ಸಂತೆಪೇಟೆ ಮಾರುಕಟ್ಟೆಗಳು ತೆರೆದಿದ್ದವು. ಜನರು ಸಹ ವ್ಯಾಪಾರ ಚಟುವಟಿಕೆ ನಡೆಸಿದರು. ನಂತರ ರೈತರು ಪ್ರತಿಭಟನೆ ನಡೆಸಿ, ತೆರೆದಿದ್ದ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.
ಪ್ರತಿಭಟನೆ ವೇಳೆ ರೈತರು ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಟೌನ್ಹಾಲ್ಗೆ ಮೆರವಣಿಗೆ ಹೊರಟರು. ಈ ಮಾರ್ಗಗಳಲ್ಲಿ ತೆರೆದಿದ್ದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿದರು. ದೇವರಾಜ ಮಾರುಕಟ್ಟೆಗೂ ಲಗ್ಗೆಯಿಟ್ಟ ರೈತರು ಬಂದ್ ಮಾಡಿಸಿದರು. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ರೈತರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಟೌನ್ಹಾಲ್, ಅಶೋಕ ರಸ್ತೆ, ಗಾಂಧಿ ವೃತ್ತದ ಬಳಿಗೆ ಮೆರವಣಿಗೆ ಹೊರಟರು. ಅಶೋಕ ವೃತ್ತದ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿದರು. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಸ್ತಬ್ಧವಾಗಿವೆ.
ಬಂದ್ ಹಿನ್ನೆಲೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಗಳ ಮಾರ್ಗಗಳಲ್ಲಿ ಬದಲಾವಣೆಯಾಗಿದೆ. ಆದರೆ ಚಾಮರಾಜನಗರ, ನಂಜನಗೂಡು, ಕೆ.ಆರ್.ನಗರ, ಹುಣಸೂರು ಕಡೆಗಳಿಗೆ ಬಸ್ಗಳ ಸಂಚಾರ ಎಂದಿನಂತಿದೆ. ಬಂದ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬಸ್ ಸಿಗದೇ ಕಾದು ನಿಂತಿದ್ದ ಮಹಿಳೆಯೊಬ್ಬರು ನಿತ್ರಾಣಗೊಂಡು ಕುಸಿದು ಬಿದ್ದ ಘಟನೆ ನಡೆಯಿತು. ಬನ್ನೂರಿಗೆ ತೆರಳಲು ಮಗಳೊಂದಿಗೆ ಮಹಿಳೆಯೊಬ್ಬರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದು ನಿಂತಿದ್ದರು. ಈ ವೇಳೆ ನಿತ್ರಾಣಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಪೊಲೀಸರು ಮಹಿಳೆ ನೆರವಿಗೆ ಧಾವಿಸಿದರು. ಆಟೋ ಮೂಲಕ ಕೆ.ಆರ್.ಆಸ್ಪತ್ರೆಗೆ ಮಹಿಳೆಯನ್ನು ರವಾನಿಸಿದರು. ಈ ವೇಳೆ ಆಟೋಗೆ ದುಡ್ಡು ಕೊಟ್ಟು ಎಎಎಸ್ಐ ದೀಪಕ್ ಪ್ರಸಾದ್ ಮಾನವೀಯತೆ ಮೆರೆದರು.
ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ . ರೈತರ ಬೇಡಿಕೆಗಳಿರುವ ಕರಪತ್ರಗಳನ್ನು ಬಸ್ ನಿಲ್ದಾಣದಲ್ಲಿ ಹಂಚಿ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.
ಭಾರಿ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ತೆರಳಿದ ರೈತರು ಅಲ್ಲಿಯೇ ಧರಣಿ ನಡೆಸುತಿದ್ದಾರೆ.