ಮೈಸೂರು: ಮೈಸೂರಿನ ಹಲವು ಬಡಾವಣೆಗಳಲ್ಲಿ ಅತಿಕ್ರಮಿಸಿಕೊಂಡಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಿವೇಶನಗಳನ್ನು ಇಂದು ಮೂಡ ವಶಕ್ಕೆ ಪಡೆಯಲಾಯಿತು.
ಮೈಸೂರಿನ ಟಿ.ಕೆ.ಬಡಾವಣೆಯ ನಿವೇಶನ ಸಂಖ್ಯೆ 777 ರಲ್ಲಿ 2400 ಚದರ ಅಡಿ ಜಾಗವನ್ನು ಅತಿಕ್ರಮಣಕಾರರಿಂದ ತೆರವುಗೊಳಿಸಲಾಯಿತು. ದಟ್ಟಗಳ್ಳಿಯಲ್ಲಿ ಸರ್ವೆ ನಂಬರ್ 114 ಮತ್ತು 115 ರಲ್ಲಿ 80×50 ಅಳತೆಯ ಮೂರು ನಿವೇಶನಗಳನ್ನು ಅತಿಕ್ರಮಿಸಿಕೊಂಡು ತಂತಿ ಬೇಲಿ ಮತ್ತು ಕಾಂಪೌಂಡ್ ನಿರ್ಮಾಣ ಮಾಡಿ ಕೊಳ್ಳಲಾಗಿತ್ತು. ಇದಲ್ಲದೆ ಟಿ ಕೆ ಬಡಾವಣೆಯ 719/ಏ ನಂಬರಿನ 60×40 ನಿವೇಶನವನ್ನೂ ಭೂಗಳ್ಳರು ಬೇಲಿ ಹಾಕಿಕೊಂಡಿದ್ದರು.
ಮುಡಾ ಅಧಿಕಾರಿಗಳ ತಂಡ ಇಂದು ದಿಢೀರ್ ಆಪರೇಷನ್ ಮಾಡಿ ನಿವೇಶನಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಜೆಸಿಬಿಗಳ ಮೂಲಕ ತಂತಿ ಬೇಲಿ ಮತ್ತು ಕಾಂಪೌಂಡ್ ಗಳನ್ನು ನೆಲಸಮಗೊಳಿಸಿ ಸುಮಾರು 15.40 ಕೋಟಿ ರೂಪಾಯಿ ಮೌಲ್ಯದ ನಿವೇಶನಗಳನ್ನು ವಶಪಡಿಸಿಕೊಂಡು ಅಲ್ಲಿ ಮುಡಾಗೆ ಸೇರಿದ ಆಸ್ತಿ ಎಂಬ ನಾಮಫಲಕ ಹಾಕಲಾಯಿತು.