ಮೈಸೂರು: ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆಯೇ ವಿನಃ ಮಾರಕವಿಲ್ಲ. ಇಂತಹ ಒಂದು ಐತಿಹಾಸಿಕ ರೈತ ಸ್ನೇಹಿ ಕೃಷಿ ಕಾಯಿದೆಯನ್ನು ನರೇಂದ್ರ ಮೋದಿ ಅವರು ಜಾರಿಗೆ ತಂದಿರುವುದನ್ನು ಎಲ್ಲರೂ ಸ್ವಾಗತಿಸಬೇಕು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಯಾವುದೇ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಉಂಟಾದಾಗ ಎಂದಿನಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆಯು ಈಗಲೂ ಮುಂದುವರಿದಿದೆ ಹಾಗೂ ಮುಂದೆಯೂ ಸಹ ಮುಂದುವರಿಯುತ್ತದೆ ಎಂದಿದ್ದಾರೆ.
ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯು ಮುಂದುವರಿಯುತ್ತದೆ. ಇವುಗಳನ್ನು ಮುಚ್ಚುವ ಅಥವಾ ಅಂತ್ಯಗೊಳಿಸುವುದಿಲ್ಲ ಎಂದು ರೈತ ಭಾಂದವರಿಗೆ ಸರ್ಕಾರ ಭರವಸೆ ನೀಡುತ್ತದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ನಂತರದಲ್ಲಿ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿ, ಹೊಲ ಅಥವಾ ಫಾರಂಗೇಟ್ ಗಳಲ್ಲಿ, ಇಲ್ಲವೇ ರಾಜ್ಯದ ಅಥವಾ ದೇಶದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಮಾರಲು ಮುಕ್ತ ಅವಕಾಶ ಕಲ್ಪಿಸಿದೆ.
ಎಪಿಎಂಸಿ ಕಾಯ್ದೆ ತಿದ್ದುಪಡಿ ಪೂರ್ವದಲ್ಲಿ ಕಾಯ್ದೆ ಕಲಂ 8 (2) ಅನ್ನು ಉಲ್ಲಂಘನೆ ಮಾಡಿದ್ದರೆ, ಕಲಂ 117ರಡಿಯಲ್ಲಿ ದಂಡ ಅಥವಾ ಶಿಕ್ಷೆಗೆ ಗುರಿಪಡಿಸುವ ಅವಕಾಶವಿತ್ತು. ಅಂದರೆ ಪ್ರಾಂಗಣದ ಹೊರಗಡೆ ಲೈಸೆನ್ಸ್ ಇಲ್ಲದೆ ಮಾರಾಟ ಮಾಡಿದ್ದಲ್ಲಿ ದಂಡ ಮತ್ತು ಶಿಕ್ಷೆಗೆ ಗುರಿಪಡಿಸಬಹುದಾಗಿತ್ತು. ಪ್ರಸ್ತುತ ತಿದ್ದುಪಡಿಯಲ್ಲಿ ದಂಡ ಮತ್ತು ಶಿಕ್ಷೆ ವಿಧಿಸುವುದನ್ನು ಕೈಬಿಟ್ಟಿರುವುದರಿಂದ ವ್ಯಾಪಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದಂತಾಗಿದೆ.
ಎಪಿಎಂಸಿ ಕಾಯ್ದೆಯಲ್ಲಿನ ತಿದ್ದುಪಡಿಯಿಂದಾಗಿ ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ದೊರೆಯುತ್ತದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ಸಂಪೂರ್ಣ ಅಧಿಕಾರವನ್ನು ರೈತರಿಗೆ ನೀಡಲಾಗಿದೆ. “ನನ್ನ ಬೆಳೆ ನನ್ನ ಹಕ್ಕು” ಎಂದು ರೈತರು ಈಗ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ರೈತರು ಯಾವುದೇ ವ್ಯಾಪಾರಗಳಿಗೆ, ಯಾವುದೇ ಮಾರುಕಟ್ಟೆಗಳಿಗೆ ಬೆಳೆಯನ್ನು ಯಾರಿಗೆ ಬೇಕಾದರೂ ನೇರವಾಗಿ ಮಾರಾಟ ಮಾಡಬಹುದು. ಯಾವುದೇ ರಾಜ್ಯದಲ್ಲಿಯೂ ಬೆಳೆ ಮಾರಾಟ ಮಾಡಬಹುದು. ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಬಂದು ರೈತರ ಬೆಳೆಯನ್ನು ಖರೀದಿ ಮಾಡಬಹುದು. ಇದರಿಂದ ಸ್ಪರ್ಧಾತ್ಮಕತೆ ಹೆಚ್ಚುವುದರಿಂದ ಹೆಚ್ಚಿನ ಬೆಲೆ ಸಿಗಲಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸಲು ಮತ್ತು ರೈತರ ಸಾಗಾಣಿಕಾ ವೆಚ್ಚ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಕ್ರಮ ವಹಿಸಿದೆ. ಅಲ್ಲದೆ, ರೈತರು ಉತ್ಪಾದನಾ ಸ್ಥಳದಿಂದ ಬೇಡಿಕೆ ಇರುವ ಪ್ರದೇಶಗಳಿಗೆ ಒಯ್ದು ಸುಲಭವಾಗಿ ಮಾರಬಹುದಾಗಿದೆ. ಇದರಿಂದ ರೈತರು ಆರ್ಥಿಕ ಶಕ್ತಿವಂತರಾಗುತ್ತಾರೆ.
ರೈತರು ಉತ್ಪನ್ನಗಳನ್ನು ಹೊಲಗಳಲ್ಲಿಯೇ ದೊಡ್ಡ ಮಟ್ಟದ ಗ್ರಾಹಕರಿಗೆ ಮಾರಲು ಅವಕಾಶ ಇರುವುದರಿಂದ ಮಧ್ಯವರ್ತಿಗಳ ಹಾವಳಿ ಅಥವಾ ಕಮಿಷನ್ ಏಜೆಂಟ್ ಗಳ ಪಾತ್ರ ಇರುವುದಿಲ್ಲ ಹಾಗಾಗಿ ಎಲ್ಲರೂ ಇದನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.