ಮೈಸೂರು: ಕಾಡಾನೆಗಳು ಅರಣ್ಯದಿಂದ ಹೊರಗೆ ಬಾರದಂತೆ ಎಲಿಫೆಂಟ್ ಕಾರಿಡಾರ್ ನಲ್ಲಿ ಅಳವಡಿಸುವ ರೈಲ್ವೆ ಕಂಬಿಗಳನ್ನು ಕಳ್ಳ ಸಾಗಾಣೆ ಮಾಡುವ ದೊಡ್ಡ ಮಾಫಿಯಾ ವೊಂದು ಬಯಲಾಗಿದೆ.
ಇಲ್ಲಿಗೆ ಸಮೀಪದ ಹೆಚ್.ಡಿ.ಕೋಟೆಯ ಎಲಿಫೆಂಟ್ ಕಾರಿಡಾರ್ ನಲ್ಲಿ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಕಾಡಿನ ಸುತ್ತ ಕಂದಕ ತೋಡಿ ರೈಲ್ವೆ ಕಂಬಿಗಳನ್ನು ಅಳವಡಿಸಲಾಗುತ್ತಿತ್ತು. ಈ ಮೂಲಕ ಕಾಡಾನೆಗಳು ಕಾಡಿನಿಂದ ನಾಡಿಗೆ ಬರುವುದನ್ನು ತಡೆಯಲಾಗುತ್ತಿತ್ತು. ಇದಕ್ಕೆ ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡುತ್ತಿದೆ.
ಆದರೆ ನಿನ್ನೆ ರೈಲ್ವೆ ಕಂಬಿಗಳನ್ನು ಕಾಡಿನಲ್ಲಿ ಅಳವಡಿಸದೆ ಅವುಗಳನ್ನು ಗುಜರಿಗೆ ಸಾಗಿಸಲಾಗುತ್ತಿದ್ದಾಗಲೇ ವಂಚಕರು ಸಿಕ್ಕಿ ಬಿದ್ದಿದ್ದಾರೆ.
ಅರಣ್ಯ ಇಲಾಖೆಯವರ ಬೆಂಬಲವಿಲ್ಲದೆ ರೈಲ್ವೆ ಕಂಬಿಗಳನ್ನು ಸಾಗಿಸಲು ಸಾಧ್ಯವಿಲ್ಲ. ಇದರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿರುವುದು ಸ್ಪಷ್ಟವಾಗಿದೆ.
ಈ ವಿಚಾರವನ್ನು ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದಾಗ, ಪೊಲೀಸರು ನೆಪ ಮಾತ್ರಕ್ಕೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಇದರ ಹಿಂದೆ ಯಾರಿದ್ದಾರೆ ಎಂಬುವುದನ್ನು ಪತ್ತೆ ಹಚ್ಚಲಾಗುತ್ತಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಅರಣ್ಯ ಇಲಾಖೆಯವರ ಜೊತೆ ಪೊಲೀಸರು ಷಾಮೀಲಾಗಿರುವುದು ಸ್ಪಷ್ಟ.