ಮೈಸೂರು: ಏಳು ವರ್ಷಗಳ ಬಳಿಕ ನಡೆಯುತ್ತಿರುವ ಐತಿಹಾಸಿಕ ತಲಕಾಡು ಪಂಚಲಿಂಗದರ್ಶನ ಮಹೋತ್ಸವಕ್ಕೆ ಇಂದು ಸಂಜೆ ವಿದ್ಯುಕ್ತ ಚಾಲನೆ ಸಿಗಲಿದೆ. ಕಾರ್ತೀಕ ಮಾಸದಲ್ಲಿ ಐದು ಸೋಮವಾರಗಳು ಬಂದು, ಕೊನೆಯ ಸೋಮವಾರ ಅಮಾವಾಸ್ಯೆಯ ಜೊತೆಗೆ ಅನುರಾಧ, ಜೇಷ್ಠಾ ಅಥವಾ ವಿಶಾಖಾ ನಕ್ಷತ್ರಗಳಲ್ಲಿ ಯಾವುದಾದರೂ ಒಂದು ನಕ್ಷತ್ರವಿದ್ದು, ಸೂರ್ಯ ಚಂದ್ರರಿಬ್ಬರೂ ವೃಶ್ಚಿಕ ಲಗ್ನದಲ್ಲಿ ಸೇರಿದಾಗ ಆದಿನದ ಉಷಾಃಕಾಲದಲ್ಲಿ ಬರುವ ಪದ್ಮಕ ಯೋಗವು ಅತ್ಯಂತ ಫಲಪ್ರದವಾದ ಪರ್ವಕಾಲವಾಗಿದ್ದು ಈ ವೇಳೆ ಪಂಚಲಿಂಗ ದರ್ಶನಕ್ಕೆ ಪರ್ವಕಾಲ ಎನ್ನಲಾಗಿದೆ. ಇಂತಹ ಪುಣ್ಯ ಸಮಯ ಪ್ರತಿಸಂವತ್ಸರದಲ್ಲೂ ಬರುವುದಿಲ್ಲ. 3ರಿಂದ 14 ವರ್ಷದ ಅವಧಿಯಲ್ಲಿ ಒಮ್ಮೆಯಷ್ಟೇ ಬರಲಿದೆ. ಆಗ ತಲಕಾಡಿನ ಪುಣ್ಯಕ್ಷೇತ್ರದಲ್ಲಿ ಪಂಚಲಿಂಗದರ್ಶನ ನಡೆಯಲಿದೆ. ಅಂದು ಕಾವೇರಿಯಲ್ಲಿ ಮಿಂದು ಅಲ್ಲಿರುವ ಪಂಚಲಿಂಗಗಳ ದರ್ಶನ ಪಡೆದರೆ ಶಿವಸಾಯುಜ್ಯ ಲಭ್ಯವಾಗಲಿದೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಇಂತಹ ಐತಿಹಾಸಿಕ ಪಂಚಲಿಂಗ ದರ್ಶನಕ್ಕೆ ಕ್ಷಣಗಣನೆ ನಡೆದಿದ್ದು, ಇಂದು ಸಂಜೆ 6 ಗಂಟೆಗೆ ವೈದ್ಯನಾಥೇಶ್ವರ ದೇವಾಲಯಕ್ಕೆ ದೀಪ ಬೆಳಗುವ ಮೂಲಕ ಹಾಗೂ ಸಂಕಲ್ಪ ಪೂಜೆಯ ಮೂಲಕ ಚಾಲನೆ ದೊರೆಯಲಿದೆ. ಇಂದಿನಿಂದ 10 ದಿನಗಳ ಕಾಲ ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಸರಳವಾಗಿ ನಡೆಯಲಿದ್ದು, ಪ್ರಧಾನ ಅರ್ಚಕ ಆನಂದ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಲಿದೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಪ್ರತಿ ದಿನ 1000 ಜನರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪಂಚಲಿಂಗ ದರ್ಶನಕ್ಕೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ಭದ್ರತಾ ದೃಷ್ಟಿಯಿಂದ 9 ಕಡೆ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ ವೈದ್ಯರನ್ನು ಒಳಗೊಂಡ 10 ತಂಡಗಳ ನಿಯೋಜನೆ ಮಾಡಲಾಗಿದೆ. ಎಲ್ಲಾ 5 ದೇವಸ್ಥಾನಗಳ ಬಳಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ನಡೆದಿದೆ.
ಅಮಾವಾಸ್ಯೆಯಂದು ಅಂದರೆ ಡಿ.14ರಂದು ಬೆಳಗಿನ ಜಾವ 4.30ಕ್ಕೆ ನಡೆಯಲಿರುವ ವಿಶೇಷ ಪೂಜೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಭಾಗವಹಿಸಲಿದ್ದಾರೆಂದು ತಲಕಾಡು ದೇಗುಲಗಳ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ. ಕಳೆದ 120 ವರ್ಷಗಳಲ್ಲಿ 11 ಬಾರಿ ಪಂಚಲಿಂಗ ದರ್ಶನವು ನಡೆದಿದ್ದು ಈ ಬಾರಿ ನಡೆಯುತ್ತಿರುವುದು 12 ನೇಯ ದರ್ಶನವಾಗಿದೆ. . 1911, 1924, 1938, 1952, 1965, 1979, 1986 , 1993 , 2006. , 2009 ಮತ್ತು 2013 ರಲ್ಲಿ ದರ್ಶನ ನಡೆದಿತ್ತು. ಇಂದು ಸಂಜೆ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ತಲಕಾಡಿಗೆ ಆಗಮಿಸಿ ಪ್ರಥಮ ದಿನದ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.