ಮೈಸೂರು: ಮದುವೆಯಾಗುವುದಾಗಿ ಹೇಳಿ ವಂಚಿಸಿದ ನೂರಾರು ಪ್ರಕರಣಗಳು ದಿನೇ ದಿನೇ ವರದಿ ಆಗುತ್ತಿವೆ. ಆದರೆ ಈ ಬಾರಿ ಈ ರೀತಿ ವಂಚಿಸಿರುವುದು ಕಾನೂನು ರಕ್ಷಕನಾಗಬೇಕಾದ ಪೋಲೀಸ್ ಅಧಿಕಾರಿ. ಅದರಲ್ಲೂ ಈತ ವಂಚಿಸಿರುವುದು ತನ್ನ ಇಲಾಖೆಯ ಸಹೋದ್ಯೋಗಿಯನ್ನೆ ಎಂಬ ವಿಷಯ ಬಹಿರಂಗಗೊಂಡಿದ್ದು ಇಲಾಖೆ ಸಾರ್ವಜನಿಕ ಮುಜುಗರ ಅನುಭವಿಸುವಂತಾಗಿದೆ. ಸಬ್ಇನ್ಸ್ಪೆಕ್ಟರ್ ವಿರುದ್ಧ ಮಹಿಳಾ ಸಬ್ಇನ್ಸ್ಪೆಕ್ಟರ್ ಒಬ್ಬರು ದೂರು ನೀಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಬ್ ಇನ್ಸ್ಪೆಕ್ಟರ್ ಆನಂದ್ ವಿರುದ್ಧ ಈ ವಂಚನೆ ಆರೋಪಿ ಆಗಿದ್ದು ಇವರ ವಿರುದ್ದ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಬ್ ಇನ್ಸ್ ಪೆಕ್ಟರ್ ರಾಧ ಅವರೇ ದೂರು ನೀಡಿದ್ದಾರೆ.
ನಗರದಲ್ಲೆ ಬೇರೆ ಬೇರೆ ಪೋಲೀಸ್ ಠಾಣೆಗಳಲ್ಲಿ ಕೆಲಸ ಮಾಡುವಾಗ ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿದೆ. ಎಲ್ಲ ಜೋಡಿಗಳಂತೆ ಸಹಜವಾಗೇ ಇವರು ಹೋಟೆಲ್ , ಪಾರ್ಕ್ ಕೆ ಆರ್ ಎಸ್ ಅಂತ ಸುತ್ತಾಟ ನಡೆಸಿದ್ದಾರೆ. ನಂತರ ಆನಂದ್ ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಗರ್ಭಿಣಿಯಾಗಿದ್ದು ನಂತರ ಗರ್ಭ ಪಾತ ಮಾಡಿಸಿದ್ದಾನೆ. ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ ನನಗೆ ಗೊತ್ತಿಲ್ಲದಂತೆ ಇನ್ನೊಂದು ಮದುವೆ ಕೂಡ ಆಗಿದ್ದಾನೆ ಎಂದು ಸಬ್ ಇನ್ಸ್ ಪೆಕ್ಟರ್ ರಾಧಾ ಗಂಭೀರ ಆರೋಪ ಮಾಡಿ ವಿಜಯನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಈ ಇಬ್ಬರು ಪೋಲೀಸ್ ಅಧಿಕಾರಿಗಳ ಪ್ರಣಯ ವಂಚನೆ ವಿಷಯ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಇಲಾಖೆಗೆ ಮುಜುಗರ ತಂದಿದೆ. ಹಿರಿಯ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.