ಮೈಸೂರು: ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ ಕೆಲವು ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿರುವ ಭಾರತೀಯ ವೈದ್ಯಕೀಯ ಸಂಘವು ಇಂದು ದೇಶಾದ್ಯಂತ ನೀಡಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿ ಅಲೋಪಥಿ ವೈದ್ಯರುಗಳು ಇಂದು ಹೊರರೋಗಿ ವಿಭಾಗ(ಒಪಿಡಿ) ಸೇವೆ ಬಹಿಷ್ಕರಿಸಿ ಭಾರತೀಯ ವೈದ್ಯಕೀಯ ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸಂಪೂರ್ಣ ಬಂದ್ ಆಗಿದೆ. ಆದರೆ ಎಲ್ಲ ಆಸ್ಪತ್ರೆಗಳಲ್ಲಿಯೂ ತುರ್ತು ಚಿಕಿತ್ಸೆ, ಔಷಧ ಅಂಗಡಿ, ಆ್ಯಂಬುಲೆನ್ಸ್, ಒಳರೋಗಿ ವಿಭಾಗದ ಸೇವೆ ಎಂದಿನಂತೆಯೇ ಇದೆ. ಕೋವಿಡ್ ರೋಗಿಗಳಿಗೆ ಕೂಡ ಚಿಕಿತ್ಸೆ ಲಭ್ಯವಿದೆ. ದೂರವಾಣಿ ಸಮಾಲೋಚನೆಗೆ ಕೂಡ ವೈದ್ಯರು ಲಭ್ಯವಿದ್ದು,ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸೇವೆಗಳೂ ಲಭ್ಯವಿದ್ದವು.
ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಎನ್.ಆನಂದರವಿ ಅವರು ಮಾತನಾಡಿ ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ಮಾಡಿಕೊಟ್ಟಿರುವ ಸರ್ಕಾರದ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದರು. ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ಅಪೆಂಡಿಕ್ಸ್, ಪಿತ್ತಕೋಶ, ಹಾನಿಕಾರಕವಲ್ಲದ ಗಡ್ಡೆ ತೆಗೆಯುವುದು, ಗ್ಯಾಂಗ್ರಿನ್, ಹಲ್ಲಿನ ರೂಟ್ ಕ್ಯಾನಲ್ ಮುಂತಾದ ಸಾಮಾನ್ಯ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲು ಸ್ನಾತಕೋತ್ತರ ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಈ ಸಂಬಂಧ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಅಧಿಸೂಚನೆ ಹೊರಡಿಸಿದೆ. ಇದು ಕೇಂದ್ರ ಸರ್ಕಾರದ ತಪ್ಪು ನಿರ್ಧಾರವಾಗಿದೆ. ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಮಾಡಲು ನೀಡಿರುವ ಅನುಮತಿ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಜನಸಾಮಾನ್ಯರು ಮುಂದಿನ ದಿನಗಳಲ್ಲಿ ಗೊಂದಲದಲ್ಲಿ ಸಿಲುಕಿ ಸಮಸ್ಯೆ ಎದುರಿಸಬೇಕಾಗಲಿದೆ. ಅರಿವು ಮೂಡಿಸುವುದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಅಲೋಪತಿ ಅನುಭವಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸುವಾಗಲೇ ಕೆಲವು ವೇಳೆ ಎಡವಟ್ಟು ಆಗುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದು ರೋಗಿಗಳ ಪ್ರಾಣದ ಜತೆ ಚೆಲ್ಲಾಟ ಆಗಲಿದೆ ಎಂದರು. ಅದಕ್ಕೆ ವೈದ್ಯಕೀಯ ಪದ್ಧತಿಗಳ ಮಿಶ್ರಣ ಬೇಡ ಎಂದು ಒತ್ತಾಯಿಸಿದರು.