ಮೈಸೂರು: ಜೆ ಡಿ ಎಸ್ ಪಕ್ಷವು ಕಾಂಗ್ರೆಸ್ ಜೊತೆ ಕೈಜೋಡಿಸುವಾಗ ಶಾಸಕರ ಅಭಿಪ್ರಾಯ ಕೇಳಿರಲಿಲ್ಲ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಕಾಂಗ್ರೆಸ್ ಜತೆ ಸೇರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಕೆಟ್ಟಿದೆ ಎಂದು ನನಗನ್ನಿಸುತ್ತಿಲ್ಲ. ಕುಮಾರಸ್ವಾಮಿ ಅವರು ಯಾವ ಅರ್ಥದಲ್ಲಿ ಈ ಮಾತು ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ಕಾಂಗ್ರೆಸ್ ಪರ ಬ್ಯಾಟ್ ಬೀಸಿದ್ದಾರೆ.
ಹೆಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಅವರು ಸೇರಿಕೊಂಡು ಕಾಂಗ್ರೆಸ್ ಜತೆ ಸೇರುವ ತೀರ್ಮಾನ ಮಾಡಿದ್ದರು. ಹಿಂದೆ ಧರ್ಮಸಿಂಗ್ ಅವರ ಜೊತೆ ಸಮ್ಮಿಶ್ರ ಸರ್ಕಾರ ಮಾಡುವಾಗ ನಮ್ಮ ಅಭಿಪ್ರಾಯ ಕೇಳಿದ್ದರು. ಈ ಬಾರಿ ಆ ರೀತಿ ಅಭಿಪ್ರಾಯ ಕೇಳಲಿಲ್ಲ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಜಾ.ದಳ-ಕಾಂಗ್ರೆಸ್ ಸಚಿವರ ಜೊತೆ ಹೊಂದಾಣಿಕೆ ಇತ್ತು. ಕುಮಾರಸ್ವಾಮಿ ಅವರಿಗೆ ಆಗಿರುವ ಕಹಿ ಅನುಭವ ನನಗೆ ಗೊತ್ತಿಲ್ಲ. ಸರ್ಕಾರದಲ್ಲಿ ಎಚ್ ಡಿ.ಕುಮಾರಸ್ವಾಮಿ ಒಳ್ಳೆ ಕೆಲಸವನ್ನೇ ಮಾಡಿದ್ದಾರೆ. ಅವರ ಹೆಸರು ಹೇಗೆ ಕೆಡುತ್ತೆ ಎಂದು ಪ್ರಶ್ನಿಸಿದರಲ್ಲದೇ, ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಸರ್ಕಾರ ಅಲ್ಲಾಡುತ್ತೇ, ಬೀಳುತ್ತೇ ಎನ್ನುವುದು ರಾಜಕೀಯ ಅಪ್ರಬುದ್ಧತೆ ಆಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯನವ ರಿಗೆ ಟಾಂಗ್ ನೀಡಿದರು.
ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಕೇಂದ್ರ-ರಾಜ್ಯದಲ್ಲಿ ಸದೃಢವಾಗಿದ್ದು ಇನ್ನೂ 5 ವರ್ಷ ಎರಡು ಕಡೆ ಬಿಜೆಪಿ ಸರ್ಕಾರ ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.