ಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿದ್ದ ಆನೆಮರಿ ವೇದಾವತಿ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದೆ. ತಾಯಿಯಿಂದ ತಪ್ಪಿಸಿಕೊಂಡಿದ್ದ ಈ ಆನೆ ಮರಿಯನ್ನು ಬಿಳಿಗಿರಿರಂಗನ ಬೆಟ್ಟದಲ್ಲಿ ಆರು ತಿಂಗಳ ಹಿಂದೆಯಷ್ಟೆ ರಕ್ಷಣೆ ಮಾಡಲಾಗಿತ್ತು.
ಅಂದು ಕೇವಲ 15 ದಿನಗಳ ಮರಿಯಾಗಿದ್ದ ಇದನ್ನು ಮೃಗಾಲಯಕ್ಕೆ ನೀಡಲಾಗಿತ್ತು. ಅದರ ಆರೈಕೆಯನ್ನು ಸೋಮು ನೋಡಿಕೊಳ್ಳುತಿದ್ದರು. ಇವರು ಈ ಹಿಂದೆ 5 ಆನೆಮರಿಗಳನ್ನು ಆರೈಕೆ ಮಾಡಿ ಹೆಸರು ಗಳಿಸಿದ್ದಾರೆ. ವೇದಾವತಿ ಆನೆಮರಿಯ ಆರೋಗ್ಯ ಸುಧಾರಿಸದೆ ಭಾನುವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ತೀರಿಕೊಂಡಿದೆ. ಸಹಜವಾಗಿ ಯಾವುದೇ ಆನೆಮರಿಗಳು ಹುಟ್ಟಿದ ಒಂದು ವರ್ಷದೊಳಗೆ ಅವುಗಳ ಆರೈಕೆ ತುಂಬಾ ಸೂಕ್ಷ್ಮತೆಯಿಂದ ಕೂಡಿರುತ್ತದೆ. ಅದರಲ್ಲೂ ವೇದಾವತಿ ಆನೆಮರಿಗೆ ಸ್ವತಃ ಆಹಾರ ಸೇವಿಸುವ ಶಕ್ತಿ ಇರಲಿಲ್ಲ. ಹೀಗಾಗಿ ಸೋಮು ಅವರೇ ಆಹಾರ ಸಿದ್ಧಪಡಿಸಿ ಪೋಷಿಸಿಸುತ್ತಿದ್ದರು. ಆನೆಮರಿಗೆ ಸೋಂಕು ಕಾಣಿಸಿಕೊಂಡು ಮೃತಪಟ್ಟಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಮೃಗಾಲಯದ ಪಶು ಚಿಕಿತ್ಸಾಲಯದಲ್ಲಿ ಮೃತಪಟ್ಟ ವೇದಾವತಿ ಎಂಬ ಆನೆಮರಿಯು ಲಾಕ್ಡೌನ್ ಸಮಯದಲ್ಲಿ ಮೃಗಾಲಯದಲ್ಲಿ ಸಂಚರಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲೂ ಆನೆಮರಿಯ ಚಲನವಲನವನ್ನು ಪ್ರಸಾರ ಮಾಡಲಾಗಿತ್ತು