ಮೈಸೂರು: ಇಲ್ಲಿಗೆ ಸಮೀಪದ ವರುಣ ನಾಲೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಕುವೆಂಪುನಗರದ ಎಂ.ಬ್ಲಾಕ್ ನಿವಾಸಿಗಳಾದ ಮುರುಳಿಧರ್ ಅವರ ಪುತ್ರ ಹರಿ (16) ಮತ್ತು ವೆಂಕಟೇಶ್ ಅವರ ಪುತ್ರ ವೈಭವ್ (13) ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ 4 ಗಂಟೆ ವೇಳೆ ಒಟ್ಟು ನಾಲ್ಕು ಮಂದಿ ವರುಣ ನಾಲೆಗೆ ಈಜಲು ಹೋಗಿದ್ದಾರೆ. ಸರಿಯಾಗಿ ಈಜಲು ಬಾರದ ಇಬ್ಬರು ಸುಮಾರು 10 ಅಡಿ ಆಳದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇನ್ನಿಬ್ಬರು ಬಾಲಕರು ಹೆದರಿ ಮನೆಗೆ ಹೋಗಿದ್ದಾರೆ. ನಾಲೆಯ ಬಳಿ ಎರಡು ಸೈಕಲ್ ನಿಂತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಒಂದು ಶವ ಮತ್ತು ಸೋಮವಾರ ಬೆಳಿಗ್ಗೆ ಮತ್ತೊಂದು ಶವ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.