ಮದ್ದೂರು: ಮದ್ದೂರು ತಾಲೂಕಿನ ಶಿಂಷಾ ನದಿ ಪಾತ್ರದಲ್ಲಿ ಸೋಮವಾರ ತಡರಾತ್ರಿಯಿಂದೀಚೆಗೆ ಪ್ರತ್ಯಕ್ಷವಾದ ನಾಲ್ಕು ಕಾಡಾನೆಗಳ ತಂಡ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
ತಾಲೂಕಿನ ಕೋಡಿಹಳ್ಳಿ, ಶಿವಪುರ ಗ್ರಾಮಗಳ ನಡುವಿನ ಶಿಂಷಾ ನದಿಗೆ ಸೋಮವಾರ ತಡರಾತ್ರಿ ಆಗಮಿಸಿರುವ ಕಾಡಾನೆಗಳ ತಂಡ ಬೆಳಗ್ಗಿನ ಜಾವ ಶಿಂಷಾನದಿ ದಕ್ಷಿಣಾಭಿಮುಖವಾಗಿ ಸಾಗಿ ವೈದ್ಯನಾಥಪುರ, ಬೂದಗುಪ್ಪೆ, ಮದ್ದೂರು ಗಡಿಯ ನದಿಯಲ್ಲಿ ಠಿಕಾಣಿ ಹೂಡಿವೆ.
ಅನಿರೀಕ್ಷಿತವಾಗಿ ಆನೆಗಳು ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮದ್ದೂರು ಪಟ್ಟಣ, ವೈದ್ಯನಾಥಪುರ, ಆಲೂರು, ಬೂದಗುಪ್ಪೆ ಇತರೆ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ವೀಕ್ಷಣೆಗೆ ಮುಂದಾದರಲ್ಲದೆ, ಎದುರಾಗಬಹುದಾದ ಅನಾಹುತ ತಪ್ಪಿಸಲು ಅಣ್ಯಾಧಿಕಾರಿಗಳು ಶ್ರಮಪಡುವಂತಾಯಿತು.
ಶಿಂಷಾ ನದಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಮಂಗಳವಾರ ರಾತ್ರಿ ಮರಳಿ ಕಾಡಿನತ್ತ ಅಟ್ಟುವ ಕಾರ್ಯಕ್ಕೆ ಮುಂದಾಗುವುದಾಗಿ ಸದರಿ ಆನೆಗಳು ಮಳವಳ್ಳಿ ತಾಲೂಕು ಮುತ್ತತ್ತಿ ವ್ಯಾಪ್ತಿಯ ಬಸವನಬೆಟ್ಟ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ವ್ಯಾಪ್ತಿಯ ಸಾರ್ವಜನಿಕರು ನದಿ ಪಾತ್ರಕ್ಕೆ ಸಂಜೆ ಬಳಿಕ ಆಗಮಿಸದಂತೆ ಆನೆಗಳು ನದಿಯಿಂದ ಆಹಾರಕ್ಕಾಗಿ ಜಮೀನುಗಳತ್ತ ಆಗಮಿಸುವ ಸಾಧ್ಯತೆಗಳಿದ್ದು ಅಪಾಯ ತಪ್ಪಿಸುವ ಸಂಬಂಧ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದೆ.