ಮೈಸೂರು: ಕಳೆದ ವರ್ಷ ನವೆಂಬರ್ನಲ್ಲಿ ಅಪಘಾತಕ್ಕೀಡಾದ ನಂತರ ಒಂದು ವರ್ಷದಿಂದ ಕೋಮಾದಲ್ಲಿದ್ದ ಸರ್ಕಾರಿ ಶಾಲಾ ಶಿಕ್ಷಕರ ಮನೆಗೆ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ಕುಟುಂಬಕ್ಕೆ ನೈತಿಕ ಸ್ಥೈರ್ಯ ತುಂಬಿದ್ದಾರೆ.
52 ವರ್ಷದ ಶಿಕ್ಷಕ ಮಹಾದೇವಸ್ವಾಮಿ ಅವರ ಪತ್ನಿ ಮಂಜುಳಾ ಅವರ ಮನವಿಯ ಮೇರೆಗೆ ನಂಜನಗೂಡಿನ ಹಂದುವಿನಹಳ್ಳಿ ಲೇಔಟ್ನಲ್ಲಿರುವ ಶಿಕ್ಷಕರ ಮನೆಗೆ ಸೋಮವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಶಿಕ್ಷಕ ಮಹಾದೇವಸ್ವಾಮಿ ಅವರು ಭುಜಂಗಯ್ಯನಹುಂಡಿ ಗ್ರಾಮದ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದರು. ಒಂದು ವರ್ಷದ ಹಿಂದೆ ಕೆಲಸ ಮಗಿಸಿ ವಾಪಾಸ್ ಸಂಜೆ ನಂಜನಗೂಡಿಗೆ ಹಿಂತಿರುಗುತಿದ್ದಾಗ ವಾಹನವೊಂದು ಅವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅವರು ತೀವ್ರ ಗಾಯಗೊಂಡರು. ಬೆನ್ನು ಮೂಳೆಗೆ ಬಿದ್ದ ಪೆಟ್ಟಿನಿಂದಾಗಿ ಅವರು ಈಗಲೂ ಹಾಸಿಗೆಯಲ್ಲೆ ಇರಬೇಕಾಗಿದೆ. ಇಲಾಖೆಯಿಂದ ನೈತಿಕ ಬೆಂಬಲವನ್ನು ನೀಡಲು ಕುಟುಂಬಕ್ಕೆ ಭೇಟಿ ನೀಡಿದ್ದೇನೆ ಎಂದು ಸುರೇಶ್ ಕುಮಾರ್ ಹೇಳಿದರು. ಮಹಾದೇವಸ್ವಾಮಿ ಅವರಿಗೆ 11 ವರ್ಷದ ಮಗನಿದ್ದಾನೆ.
ಮಹದೇವಸ್ವಾಮಿ ಅವರು ಸ್ವಯಂಪ್ರೇರಿತ ನಿವೃತ್ತಿಗೆ ಅರ್ಜಿ ಸಲ್ಲಿಸಬೇಕೆಂದು ಸುರೇಶ್ ಕುಮಾರ್ ಅವರು ಸೂಚಿಸಿದ್ದು ಇಲಾಖೆಯಿಂದ ದೊರೆಯುವ ಎಲ್ಲ ಆರ್ಥಿಕ ಸವಲತ್ತುಗಳನ್ನೂ ಶೀಘ್ರವಾಗಿ ಕೊಡಿಸಿಕೊಡುವ ಭರವಸೆ ನೀಡಿದರು. ಇದಲ್ಲದೆ ಶಿಕ್ಷಕರ ಪತ್ನಿ ಮಂಜುಳಾ ಅವರಿಗೆ ಇಲಾಖೆಯಲ್ಲೆ ಕೆಲಸ ನೀಡುವುದಾಗಿ ಭರವಸೆ ನೀಡಿದರು. ಇದಲ್ಲದೆ ಅಪಘಾತದಿಂದ ಪರಿಹಾರವನ್ನು ಪಡೆಯಲು ನ್ಯಾಯಾಲಯದಲ್ಲಿ ಹೋರಾಡಲು ವಕೀಲರನ್ನು ಕೂಡ ನಿಯೋಜಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪಾಂಡುರಂಗ, ಬ್ಲಾಕ್ ಶಿಕ್ಷಣ ಅಧಿಕಾರಿ ಸಿ ಎನ್ ರಾಜು ಸಚಿವರ ಭೇಟಿ ಸಮಯದಲ್ಲಿ ಹಾಜರಿದ್ದರು.
ಶಿಕ್ಷಕರ ಮನೆಗೆ ಸಚಿವರ ಭೇಟಿಯು ಕುಟುಂಬದವರಿಗೆ ನೆಮ್ಮದಿ ಜತೆಗೆ ಚೈತನ್ಯವನ್ನೂ ನೀಡಿದೆ ಎಂದು ಮಂಜುಳಾ ಹೇಳಿದರು.