ಮೈಸೂರು: ದೇಶದಲ್ಲಿ ಮುಸ್ಲಿಂ ಸಮುದಾಯ ಓಬಿಸಿ ಗೆ ಸೇರುವುದನ್ನು ವಿರೋಧಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಓಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್ ರಾವ್ ಹೇಳಿದರು.
ಮೈಸೂರು ರಾಜೇಂದ್ರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಮುಂದಾಗಿದೆ. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದರು.
ಜಸ್ಟಿಸ್ ರೋಹಿಣಿ ಆಯೋಗದ ಶಿಫಾರಸಿನ ಅನ್ವಯ ದೇಶದ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಮೀನುಗಾರಿಕೆ ಸಮುದಾಯದವರಿಗೆ ವಿಶೇಷ ಸವಲತ್ತು ನೀಡಲಾಗಿದೆ. ಜಸ್ಟಿಸ್ ರೋಹಿಣಿ ಆಯೋಗ ನೀಡಿರುವ ವರದಿಯನ್ನು ದೇಶಾದ್ಯಂತ ವೈಜ್ಞಾನಿಕ ಸಮೀಕ್ಷೆ ನಡೆಸಿ ಲೋಕಸಭಾ ಹಾಗೂ ರಾಜ್ಯಸಭೆಗಳಲ್ಲಿ ಚರ್ಚಿಸಿ ಅನುಷ್ಠಾನಗೊಳಿಸುತ್ತೇವೆ. ಕಳೆದ 6 ವರ್ಷಗಳಲ್ಲಿ ಕೇಂದ್ರೀಯ ವಿದ್ಯಾಲಯ, ಕಾನೂನು ವಿದ್ಯಾಲಯ, ನವೋದಯ ಶಾಲೆ ಹಾಗೂ ಸೈನಿಕ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ 72 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಇದು 72 ವರ್ಷದ ಬಳಿಕ ದೇಶದಲ್ಲೇ ಬದಲಾವಣೆ ಕಾಣಲು ಸಾಧ್ಯವಾಗಿದೆ. ಮೋದಿ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಹಲವಾರು ಸಮುದಾಯದ ಎಲ್ಲಾ ಬಡವರಿಗೆ ಮೀಸಲಾತಿ ನೀಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಕೃಷಿ ಕಾನೂನಿನ ಕುರಿತು ಮಾತನಾಡಿದ ಅವರು ಕೃಷಿ ಕಾನೂನು ರೈತರ ಪರವಾಗಿದೆ. ಈ ಕಾನೂನಿನಿಂದ ರೈತರಿಗೆ ನೇರವಾಗಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ ರೈತರಿಗೆ ಯಾವುದೇ ಸಮಸ್ಯೆಯೂ ಆಗದು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಓಬಿಸಿ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ಶಾಸಕ ಎಲ್.ನಾಗೇಂದ್ರ, ಶಾಸಕ ಎಸ್ ಎ ರಾಮದಾಸ್ ಮತ್ತಿತರರು ಉಪಸ್ಥಿತರಿದ್ದರು.