ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು (ಮುಡಾ) `ದಲ್ಲಾಳಿ ಮುಕ್ತ ಮುಡಾ’ ಮಾಡುವುದು ಸರ್ಕಾರದ ಗುರಿ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಇಂದು ಪ್ರಾಧಿಕಾರದ ಆವರಣದಲ್ಲಿ ಏಕಗವಾಕ್ಷಿ ವ್ಯವಸ್ಥೆ ಮುಖಾಂತರ `ನಿಮ್ಮ ಮನೆ ನಿಮ್ಮ ನಕ್ಷೆಗೆ ಲೈಸೆನ್ಸ್’ ನೀಡುವ ಯೋಜನೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಟಾಸ್ಕ್ ಫೋರ್ಸ್ ಇಲ್ಲ. ಈ ಬಗ್ಗೆ ನಗರಾಭಿವೃದ್ಧಿ ಸಚಿವರ ಗಮನಕ್ಕೆ ಟಾಸ್ಕ್ ಫೋರ್ಸ್ ಮಾಡಿಸಿ ದಲ್ಲಾಳಿ ಮುಕ್ತ ಮುಡಾ ಮಾಡಬೇಕೆಂಬ ಚಿಂತನೆ ಇದ್ದು, ಮುಂದಿನ ದಿನಗಳಲ್ಲಿ ಆ ಕೆಲಸವಾಗಲಿದೆ ಎಂದರು.
ಮಧ್ಯವರ್ತಿಗಳ ಹಾವಳಿ ಇಲ್ಲದೆಯೇ ನಿಮ್ಮ ಮನೆಗೆ ಲೈಸನ್ಸ್ ನೀಡಲು ಈ ಯೋಜನೆಗೆ ಚಾಲನೆ ನೀಡಲಾಗಿದೆ. ಅರ್ಜಿ ಸಲ್ಲಿಸಿದ ದಿನದಂದೇ ಮನೆ ನಿರ್ಮಾಣದ ಪ್ರಾರಂಭಿಕ ಲೈಸನ್ಸ್ ನೀಡಲಾಗುವುದು. ಆ ಮೂಲಕ `ದಲ್ಲಾಳಿ ಮುಕ್ತ ಮುಡಾ’ ಮಾಡಲು ಶ್ರಮಿಸಲಾಗುತ್ತಿದೆ. ಸಾರ್ವಜನಿಕರು ಸಹ ದಲ್ಲಾಳಿ ಮುಖಾಂತರ ಹೋಗುವುದನ್ನು ಬಿಟ್ಟು ಸಹಾಯಕ ನಿರ್ದೇಶಕರ ಮೂಲಕ ಕೆಲಸ ಮಾಡಿಸಿಕೊಂಡು ದಲ್ಲಾಳಿ ಮುಕ್ತ ಮಾಡುವಲ್ಲಿ ಸಹಕರಿಸಬೇಕೆಂದು ಹೇಳಿದರು.
ಮುಡಾದಿಂದ ನಿವೇಶನದಾರಿಗೆ ಅನುಕೂಲ ಕಲ್ಪಿಸುವ ವಿನೂತನ ಕಾರ್ಯಕ್ರಮ ಇದ್ದಾಗಿದ್ದು, ಈ ಮೊದಲು ಅರ್ಜಿ ಸಲ್ಲಿಸಿ ಸುಮಾರು 1 ರಿಂದ 2 ತಿಂಗಳು ಮನೆ ಕಟ್ಟಡ ಲೈಸನ್ಸ್ ಗಾಗಿ ಅಲೆದಾಡಬೇಕಿತ್ತು. ಇದೀಗ ಅರ್ಜಿ ಸಲ್ಲಿಸಿದ ದಿನದಂದೇ ಲೈಸೆನ್ಸ್ ಸಿಗಲಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದಲೇ ಸಹಾಯಕ ನಿರ್ದೇಶಕರು, ಟೌನ್ ಪ್ಲಾನಿಂಗ್ ಅವರನ್ನು ನೇಮಿಸಿದ್ದಾರೆ. ಅವರನ್ನು ನೇರವಾಗಿ ಭೇಟಿಯಾದರೆ ಅವರು ಪರಿಶೀಲನೆ ಮಾಡುತ್ತಾರೆ. ನಂತರ ಶುಲ್ಕ ಕಟ್ಟಿದರೆ ತಕ್ಷಣ ಲೈಸನ್ಸ್ ಕೊಡುತ್ತಾರೆ. ಎಂದರು.
ಅಧಿಕಾರಿಗಳೇ ದಲ್ಲಾಳಿ ಮುಖಾಂತರ ಬನ್ನಿ ಎಂದು ಹೇಳುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆ ರೀತಿಯ ದೂರು ಬಂದರೆ ಅಂತಹ ಅಧಿಕಾರಿಯನ್ನು ಕೂಡಲೇ ಎತ್ತಂಗಡಿ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳ ಈ ರೀತಿಯ ನಡೆಯನ್ನು ಸರ್ಕಾರ ಸಹಿಸುವುದಿಲ್ಲ ಎಂದರು.