ಮೈಸೂರು: ಇಲ್ಲಿಗೆ ಸಮೀಪದ ನಂಜನಗೂಡು ತಾಲ್ಲೂಕಿನ ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಮ್ಮಾವು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾವಣಾ ಬಹಿಷ್ಕಾರ ಹಾಕಿದ್ದಾರೆ.
ಈ ಹಿಂದೆ ಗ್ರಾಮದ ಯುವಕರಿಗೆ ಇಲ್ಲಿನ ಏಷಿಯನ್ ಪೈಂಟ್ಸ್ ಕಾರ್ಖಾನೆಯಲ್ಲಿ ಉದ್ಯೋಗ ಭರವಸೆ ನೀಡದ ಕಾರಣ ಅಸಮಾಧಾನಗೊಂಡಿರುವ ಗ್ರಾಮಸ್ಥರು ಚುನಾವಣಾ ಬಿಹಿಷ್ಕಾರ ನಿರ್ಧಾರ ಕೈಗೊಂಡಿದ್ದಾರೆ. ಏಷಿಯನ್ ಪೇಂಟ್ಸ್ ಕಾರ್ಖಾನೆಗೆ ಗ್ರಾಮದಲ್ಲಿ ಜಮೀನು ನೀಡಲಾಗಿತ್ತು.
ನಿನ್ನೆ ಬುಧವಾರ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದರೂ ಯಾರು ಕೂಡ ನಾಮಪತ್ರ ಸಲ್ಲಿಸಲಿಲ್ಲ. ನಾಮಪತ್ರ ಸಲ್ಲಿಸುವಂತೆ ತಾಲ್ಲೂಕು ಆಡಳಿತ ಹಾಗೂ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರಾದರೂ ಗ್ರಾಮಸ್ಥರು ಸೊಪ್ಪು ಹಾಕಿಲ್ಲ. ತಾಲ್ಲೂಕು ಆಡಳಿತ ಹಾಗೂ ಚುನಾವಣಾಧಿಕಾರಿಗಳ ಸಂದಾನ ವಿಫಲಗೊಂಡಿದೆ.
ಈ ವೇಳೆ ತಹಸಿಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಇಮ್ಮಾವು ಗ್ರಾಮದ ಜನರು ಕಳೆದ 23 ದಿನಗಳಿಂದ ಏಷಿಯನ್ ಪೇಂಟ್ಸ್ ನಲ್ಲಿ ಉದ್ಯೋಗಕ್ಕಾಗಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು. ಆಗ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸುವುದಾಗಿಯೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು.
ಇದುವರೆಗೂ ಹುಳಿ ಮಾವು ಗ್ರಾಮದ 16 ವಾರ್ಡ್ಗಳ ಪೈಕಿ 13 ವಾರ್ಡ್ಗಳಿಗೆ ಮಾತ್ರ ನಾಮಪತ್ರ ಸಲ್ಲಿಕೆಯಾಗಿದೆ. ಇಮ್ಮಾವು ಗ್ರಾಮದ 3 ವಾರ್ಡ್ಗಳಿಗೆ ಯಾವೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿಲ್ಲದಿರುವುದರಿಂದ ಚುನಾವಣೆ ನಡೆಯುತ್ತಿಲ್ಲ.