ಮೈಸೂರು: ಅಪರಿಚಿತ ಸುಂದರ ಯುವತಿಯರ ಫ್ರೆಂಡ್ ರಿಕ್ವೆಸ್ಟ್ ಗಳನ್ನು ಫೇಸ್ ಬುಕ್, ಟ್ವಿಟರ್ , ಇನ್ಸ್ಟಾ ಗ್ರಾಂ ನಲ್ಲಿ ಸ್ವೀಕರಿಸುವಾಗ ಎಚ್ಚರಿಕೆ ವಹಿಸಬೇಕೆಂದು ಡಿಸಿಪಿ ಡಾ ಎ ಎನ್ ಪ್ರಕಾಶ್ ಗೌಡ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ನಕಲಿ ಸುಂದರ ಯುವತಿಯರ ಫೋಟೋ ಹಾಕಿಕೊಂಡಿರುವ ಗ್ಯಾಂಗ್ ಯುವತಿಯರ ಮೂಲಕ ವಾಟ್ಸ್ಯಾಪ್ ಮೆಸೆಂಜರ್ ನಲ್ಲಿ ಸಂಭಾಷಣೆ ಶುರುಮಾಡುತ್ತಾರೆ. ನಂತರ ತಡರಾತ್ರಿ ವಿಡಿಯೋ ಕಾಲ್ ಮಾಡಿ ಏಕಾಏಕಿ ಬೆತ್ತಲೆ ದೃಶ್ಯವನ್ನು ತೋರಿಸಿ ನಿಮ್ಮನ್ನು ಬೆತ್ತಲಾಗುವಂತೆ ಪ್ರಚೋದಿಸುತ್ತಾರೆ. ಬೆತ್ತಲಾದರೆ ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳುತ್ತಾರೆ, ಇಲ್ಲವಾದರೆ ತಕ್ಷಣ ವಿಡಿಯೋ ಕಾಲ್ ನ ಸ್ಕ್ರೀನ್ ಶಾಟ್ ತೆಗೆದುಕೊಳ್ಳುತ್ತಾರೆ. ಕರೆ ಸ್ವೀಕರಿಸಿದವರ ಜತೆಗೆ ಕರೆ ಮಾಡಿದವರ ಬೆತ್ತಲೆ ಫೋಟೋ ಸಹ ಸೆರೆಯಾಗಲಿದೆ.
ಇದನ್ನೇ ಬಂಡವಾಳಗಿಟ್ಟುಕೊಂಡು ಕರೆ ಸ್ವೀಕರಿಸಿದ ವ್ಯಕ್ತಿಗೆ ಅಶ್ಲೀಲ ಫೋಟೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುವ ವಂಚಕರು ಫೋನ್ ಪೇ, ಗೂಗಲ್ ಪೇ ಅಥವಾ ನೆಟ್ ಬ್ಯಾಂಕಿಂಗ್ ನಲ್ಲಿ ಹಣ ಕಳುಹಿಸುವಂತೆ ಬೆದರಿಕೆ ಒಡ್ಡುತ್ತಾರೆ. ಇಲ್ಲವಾದರೆ ಸ್ನೇಹಿತರ, ಕುಟುಂಬ ಸದಸ್ಯರ ಫೇಸ್ಬುಕ್ ಖಾತೆಗೆ ಅಶ್ಲೀಲ ಫೋಟೋ ಟ್ಯಾಗ್ ಮಾಡುವ ಬೆದರಿಕೆ ಹಾಕುತ್ತಾರೆ. ವಾಟ್ಸ್ಯಾಪ್ ಗೆ ಫೋಟೋ ಕಳುಹಿಸಿ ತನ್ನ ಬೆತ್ತಲೆ ದೃಶ್ಯ ನೋಡಿರುವ ಬಗ್ಗೆ ತಿಳಿಸಿ ಮರ್ಯಾದೆ ತೆಗೆಯುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿ ಸುಲಿಗೆ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕ ಮಾಹಿತಿಗಳನ್ನು ಶೇರ್ ಮಾಡೋ ಮುನ್ನ ಎಚ್ಚರವಿರಲಿ ಎಂದು . ಪ್ರಕಾಶ್ ಗೌಡ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಗಳು ಹೆಚ್ಚುತ್ತಲೇ ಇವೆ. ಹೇಗೋ ಪರಿಚಯ ಮಾಡಿಕೊಂಡು ಹಣ ಕೀಳುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಜನರನ್ನು ಎಷ್ಟು ಜಾಗೃತಿ ಮೂಡಿಸಿದರೂ ಕೂಡ ಜನತೆ ಅರ್ಥ ಮಾಡಿಕೊಳ್ಳುವ ಹೋಗದೇ ಇರುವುದೇ ಬೇಸರದ ಸಂಗತಿ. ನಕಲಿ ಫೇಸ್ ಬುಕ್ ಖಾತೆ ತೆರೆದು ಹಣ ಕೇಳುವ ಅಪರಾಧ ಚಟುವಟಿಕೆ ನಡೆಯುತ್ತಿರುತ್ತದೆ. ಈ ಬಗ್ಗೆ ನಿಮಗೆ ಯಾರಾದರೂ ಹಣ ಕೇಳಿ ಮೆಸೇಜ್ ಕಳುಹಿಸಿದರೆ ಹಣ ಕಳುಹಿಸಬೇಡಿ. ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಎಚ್ಚರಿಸಿದರು.