ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಕ್ರಿಸ್ಮಸ್ ಸಡಗರ ಮನೆಮಾಡಿದೆ. ಕ್ರೈಸ್ತ ಬಾಂಧವರು ಹಬ್ಬದ ಸಂಭ್ರಮದಲ್ಲಿದ್ದರೆ, ನಗರದ ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ನಗರದ ವಿವಿಧೆಡೆ ಇರುವ ಚರ್ಚ್ಗಳು ದೀಪಾಲಂಕಾರದಿಂದ ಅಲಂಕೃತಗೊಂಡು ಹಬ್ಬದ ರಂಗೇರಿಸಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿ, ಆಡಂಭರದ ಕ್ರಿಸ್ಮಸ್ ಆಚರಣೆಗೆ ಬ್ರೇಕ್ ಬಿದ್ದಿದ್ದು, ಸರ್ಕಾರದ ಮಾರ್ಗಸೂಚಿಗಳನ್ವಯ ಕ್ರಿಸ್ಮಸ್ ಆಚರಣೆಗೆ ಚರ್ಚ್ಗಳು ಸಿದ್ಧವಾಗಿವೆ. ಚರ್ಚ್ಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ನಕ್ಷತ್ರಗಳಿಂದ ಕಂಗೊಳಿಸುತ್ತಿವೆ. ಕ್ರಿಸ್ಮಸ್ ಮರಕ್ಕೆ ಬಣ್ಣಬಣ್ಣದ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ ಚರ್ಚ್ ಆವರಣದಲ್ಲಿ ಏಸುಕ್ರಿಸ್ತನ ಮೂರ್ತಿಗಳನ್ನು ವಿಶೇಷವಾಗಿ ಸಿಂಗರಿಸಿ, ಏಸು ಜನಿಸಿದ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಚರ್ಚ್ಗಳಲ್ಲಿ 24ರ ರಾತ್ರಿಯಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆಯುವುದರಿಂದ ಸಾವಿರಾರು ಮಂದಿ ಚರ್ಚ್ಗಳಿಗೆ ಆಗಮಿಸಲಿದ್ದು, ಕೋವಿಡ್ ಸೋಂಕು ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸೀಮಿತ ಜನರಿಗೆ ಮಾತ್ರ ಅವಕಾಶ ನೀಡುವುದಾಗಿ ಈಗಾಗಲೇ ಚರ್ಚ್ಗಳು ಘೋಷಿಸಿವೆ. ಅಲ್ಲದೆ ಕೆಲ ಚರ್ಚ್ಗಳಲ್ಲಿ ಪ್ರಾರ್ಥನೆ ಸಮಯವನ್ನು ಬದಲಾವಣೆ ಮಾಡಲಾಗಿದೆ. ಆದರೂ ಹಬ್ಬದ ಸಂಭ್ರಮ ಮಾತ್ರ ಕಳೆಗುಂದಿಲ್ಲ. ಕ್ರೈಸ್ತ ಬಾಂಧವರು ವಿಶೇಷ ರೀತಿಯಲ್ಲಿ ಹಬ್ಬವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ನಲ್ಲಿ ವಿಶೇಷವಾಗಿ ಕ್ರಿಸ್ಮಸ್ ಆರಚಣೆ ನಡೆಯಲಿದ್ದು, ಸೀಮಿತ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೆ ಚರ್ಚ್ನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಚರ್ಚ್ನ ಒಳಾವರಣವೂ ಪ್ರಾರ್ಥನೆಗೆ ವಿಶೇಷವಾಗಿ ಸಿದ್ಧವಾಗಿದೆ. ಗುರುವಾರ ರಾತ್ರಿಯಿಂದಲೇ ಪೂಜಾ ಕಾರ್ಯಗಳು ಆರಂಭವಾಗಲಿದ್ದು, ಶುಕ್ರವಾರ ಸಂಜೆ 5 ಗಂಟೆವರೆಗೂ ಪೂಜಾ ವಿಧಿವಿಧಾನಗಳು ಜರುಗಲಿವೆ. ಚರ್ಚ್ನ ಒಳಾವರಣದಲ್ಲಿ ಸಾವಿರ ಮಂದಿ ಕೂರಲು ಅವಕಾಶವಿದ್ದು, 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೊರಾವರಣದಲ್ಲೂ ಪ್ರಾರ್ಥನೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲಾಗಿದೆ.
ಇದಲ್ಲದೆ ನಗರದ ಹಳೆಯ ಚರ್ಚ್ಗಳಲ್ಲಿ ಒಂದಾದ ಸಬರ್ಬನ್ ಬಸ್ ನಿಲ್ದಾಣದ ಬಳಿ ಇರುವ ಸಂತ ಬಾರ್ತೊಲೋಮಿಯಾ ಚರ್ಚ್ನಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 7 ಗಂಟೆಗೆ ಮೊದಲ ಪೂಜಾ ಕಾರ್ಯ ನಡೆಯಲಿದ್ದು, 8.30ಕ್ಕೆ ಎರಡನೇ ಪೂಜೆ ನಡೆಯಲಿದೆ. ಕೋವಿಡ್-19ಹಿನ್ನೆಲೆಯಲ್ಲಿ ಕೇವಲ ಚರ್ಚ್ ಸದಸ್ಯರಿಗೆ ಮಾತ್ರ ಅವಕಾಶ ಕಲ್ಲಿಸಲಾಗಿದೆ.