ಮೈಸೂರು: ಇಲ್ಲಿನ ರಂಗಾಯಣವು ಕೋವಿಡ್ ಸಮಯದಲ್ಲೂ ನಡೆಸಿದ ಒಂದು ವರ್ಷದ ಚಟುವಟಿಕೆಯ ಮಾಹಿತಿಯನ್ನು ಜನತೆಯ ಮುಂದಿಡುವ ಮತ್ತು ದಾಖಲಿಸುವ ಪ್ರಯತ್ನವಾಗಿ `ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು’ ಎಂಬ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ.
ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು, ಡಿ.31 ಮಧ್ಯಾಹ್ನ 3.30ಕ್ಕೆ ರಂಗಾಯಣದ ಯೋಗವನ ಆವರಣ ಮತ್ತು ಭೂಮಿಗೀತದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ಕಲಾ ನಿರ್ದೇಶ ಶಶಿಧರ್ ಅಡಪ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ `ಕೋಲಾಟ ಮತ್ತು ರಾಗ ಸರಾಗ’ ಪ್ರಾತ್ಯಕ್ಷಿಕೆ ಪ್ರದರ್ಶನವಿದೆ. ಸಂಜೆ 6.30ಕ್ಕೆ ವನರಂಗದಲ್ಲಿ ಪುತ್ತೂರಿನ ಆಂಜನೇಯ ಮಹಿಳಾ ಯಕ್ಷಗಾನ ತಂಡದಿಂದ `ಭೀಷ್ಮಾರ್ಜುನ’ ತಾಳಮದ್ದಳೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಜ.2 ರಿಂದ ರಾಗ ರಂಗಾಯಣ: ರಂಗಭೀಷ್ಮ ಬಿ.ವಿ.ಕಾರಂತರು ಸಂಗೀತ ಎನ್ನುವುದು ನಿಜವಾದ ಸೆಕ್ಯೂಲರ್. ಸಂಗೀತಕ್ಕೆ ಧರ್ಮದ ಹಂಗಿಲ್ಲ. ಅಭಿನಯ-ನಾಟಕ ಅಭಿನೀತವಾಗೋದು ಸಂಗೀತದ ಮೂಲಕ ಎಂದು ಹೇಳಿದ್ದರು. ಅವರ ಈ ಮಾತಿನಿಂದ ಪ್ರೇರಣೆಗೊಂಡು ರಂಗಾಯಣವು `ರಾಗ ರಂಗಾಯಣ’ ವನ್ನು ಪ್ರಸ್ತುತ ಪಡಿಸುತ್ತಿದೆ. ಪ್ರತಿ ತಿಂಗಳ ಮೊದಲ ಶನಿವಾರ ಕವಿಗಳ ಕಾವ್ಯ ಗಾಯನ, ಜನಪದ ಮಹಾಕಾವ್ಯ ಗಾಯನ, ರಂಗಗೀತೆಗಳು, ತತ್ವಪದ ಗಾಯನ, ವಚನ ಗಾಯನ ಇತ್ಯಾದಿಗಳು ಈ ಕಾರ್ಯಕ್ರಮದಲ್ಲಿರಲಿದೆ.
ಹೊಸ ವರ್ಷದಿಂದ ಈ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಜ.2 ರಂದು ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ `ರಾಗ ರಂಗಾಯಣ’ ಮೊದಲ ಕಾರ್ಯಕ್ರಮವಾಗಿ `ಬೇಂದ್ರೆ ಬೆರಗು’ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದೆ. ಖ್ಯಾತ ಗಾಯಕಿ ಹೆಚ್.ಆರ್.ಲೀಲಾವತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಭಾರತೀಯ ರಂಗಭೂಮಿಯಲ್ಲಿ `ರಂಗಭೀಷ್ಮ’ ಎಂದು ಕರೆಸಿಕೊಂಡ ಪದ್ಮಶ್ರೀ ಬಿ. ವಿ. ಕಾರಂತರ ರ ಹೆಸರನ್ನು ಚಿರಸ್ಥಾಯಿಯಾಗಿಸಲು ಕರ್ನಾಟಕ ಕಲಾಮಂದಿರ ಮತ್ತು ರಂಗಾಯಣಕ್ಕೆ ಹೊಂದಿಕೊಂಡಿರುವ (ಹುಣಸೂರು ಮುಖ್ಯರಸ್ತೆಯಿಂದ ಕುಕ್ಕರಹಳ್ಳಿ ಕೆರೆಯ ಕಡೆಗೆ ರೈಲ್ವೆ ಗೇಟ್ ತನಕ) ರಸ್ತೆಗೆ `ಪದ್ಮಶ್ರೀ ಬಿ.ವಿ.ಕಾರಂತ ರಸ್ತೆ’ ಎಂದು ನಾಮಕರಣ ಮಾಡಬೇಕೆಂದು ಸರ್ಕಾರವನ್ನು ಅಡ್ಡಂಡ ಸಿ.ಕಾರ್ಯಪ್ಪ ಅವರು ಒತ್ತಾಯಿಸಿದರು.
ಡಿ.31 ರಂದು ಬೆಳಿಗ್ಗೆ 11.30ಕ್ಕೆ ರಂಗಾಯಣದ ಗೇಟ್ ನ ಮುಂಭಾಗದ ರಸ್ತೆಯಲ್ಲಿ ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಅಧ್ಯಕ್ಷ ಎಚ್.ಎಸ್.ಸುರೇಶ್ ಬಾಬು, ಹಿರಿಯ ರಂಗಕರ್ಮಿ ಜಯರಾಮ್ ಪಾಟೀಲ್, ರಾಜಶೇಖರ ಕದಂಬ ಅವರ ನೇತೃತ್ವದಲ್ಲಿ `ಪದ್ಮಶ್ರೀ ಬಿ.ವಿ.ಕಾರಂತ ರಸ್ತೆ’ ನಾಮಕರಣಕ್ಕೆ ಒತ್ತಾಯಿಸಿ ಅಭಿಯಾನ ಆರಂಭಿಸಿ ಈ ಬಗ್ಗೆ ಮಹಾನಗರಪಾಲಿಕೆಗೆ ಮನವಿ ಪತ್ರವನ್ನು ನೀಡಲಾಗುವುದು ಎಂದರು.